ಚಾಮರಾಜನಗರ : ಶಾಲೆಗೆ ಚಕ್ಕರ್ ಊಟಕೆ ಹಾಜರ್ ಎಂಬ ಹಾಡಿದೆ, ಇದರರ್ಥ ಶಾಲೆಗೆ ಚಕ್ಕರ್ ಹಾಕಿದರೂ ಪರವಾಗಿಲ್ಲ ಊಟಕ್ಕೆ ಹಾಜರು ಎಂದು, ಆದರೆ ಚಾಮರಾಜನಗರದ ಕೊಳ್ಳೆಗಾಲದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ.
ರಾಜ್ಯದಲ್ಲಿ ಕೆಲವೊಮ್ಮೆ ವಿದ್ಯಾರ್ಥಿನಿಗಳಿಗೆ ಮದುವೆ ಫಿಕ್ಸ್ ಆದರೆ ಬಳಿಕ ಕಾಲೇಜು ಕನಸು ಕನಸಾಗಿಯೇ ಉಳಿಯುತ್ತದೆ.ಅದರಲ್ಲೂ ಕೆಲ ಯುವತಿಯರು ಮದುವೆಯಾಗಿ ಕೆಲ ಸಮಯದ ಬಳಿಕ ಓದಿ ಪರೀಕ್ಷೆ ಬರೆದಿರುವ ನಿದರ್ಶನಗಳಿವೆ.
ಆದರೆ ಕೊಳ್ಳೇಗಾಲದಲ್ಲಿ ಸಂಗೀತ ಎಂಬುವವರು ತಾಳಿ ಕಟ್ಟಿದ ಮರು ಕ್ಷಣವೇ ಪರೀಕ್ಷೆಗೆ ಹಾಜರಾಗಿರುವಂತಹ ಘಟನೆ ನಡೆದಿದೆ. ಹಸೆಮಣೆ ಏರಿ ಕೆಲವೇ ಕ್ಷಣದಲ್ಲಿ ಯುವತಿ ಪರೀಕ್ಷೆಗೆ ಹಾಜರಾಗಿದ್ದು, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೊಳ್ಳೇಗಾಲ ಮೂಲದ ಸಂಗೀತ ಎಂಬುವವರು ಇಂದು ನಂಜನಗೂಡು ತಾಲೂಕಿನ ಸಿಂಧುವಳ್ಳಿ ಯೋಗೇಶ್ ಎಂಬುವವರ ಜೊತೆ ವಿವಾಹವಾದರು. ಇದಾಗಿ ಕೆಲವೇ ನಿಮಿಷದಲ್ಲಿ ಕುಟುಂಬ ಸಮೇತರಾಗಿ ಬಂದು ಸಂಗೀತ ಅವರನ್ನು ಪರೀಕ್ಷಾ ಕೇಂದ್ರಕ್ಕೆ ಬಿಟ್ಟಿದ್ದಾರೆ.
ಅಷ್ಟೇ ಅಲ್ಲದೆ, ಪರೀಕ್ಷೆ ಮುಗಿಯುವ ವರೆಗೆ ಅಲ್ಲೇ ಕಾಯುತ್ತಾ ಇದ್ದರೂ ಎಂದು ಹೇಳಲಾಗಿದೆ. ಸದ್ಯ ಸಂಗೀತ ಅವರು ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಹಿಡಿದುಕೊಂಡು ಹೋಗುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.