ನವದೆಹಲಿ : ದೇಶದ ಮೊದಲ ಬುಲೆಟ್ ರೈಲು 2027ರ ಸ್ವಾತಂತ್ರ್ಯ ದಿನಾಚರಣೆಯಂದು ಕಾರ್ಯಾಚರಣೆ ಆರಂಭಿಸಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ.
ಮುಂಬಯಿಯಿಂದ ಅಹಮದಾಬಾದ್ ಸಂಪರ್ಕಿಸುವ 508 ಕಿ.ಮೀ. ಉದ್ದದ ಈ ಹೈ ಸ್ಪೀಡ್ ರೈಲು ಕಾರಿಡಾರ್ ಒಟ್ಟು 5 ಹಂತಗಳಲ್ಲಿ ನಿರ್ಮಾಣವಾಗುತ್ತಿದೆ.
ಮೊದಲ ಹಂತವಾಗಿ ಸೂರತ್‌ನಿಂದ ಬಿಲಿಮೋರಾ ನಡುವಣ 49 ಕಿ.ಮೀ. ಮಾರ್ಗದಲ್ಲಿ ಬುಲೆಟ್ ರೈಲು ಮೊದಲಿಗೆ ಉದ್ಘಾಟನೆಯಾಗಿ ಸಂಚರಿಸಲಿದೆ.
2ನೇ ಹಂತದಲ್ಲಿ ವಾಪಿಯಿಂದ ಸೂರತ್ ನಡುವಣ ಮಾರ್ಗ ಉದ್ಘಾಟನೆಯಾಗಲಿದ್ದರೆ, 3ನೇ ಹಂತದಲ್ಲಿ ವಾಪಿಯಿಂದ ಅಹಮದಾಬಾದ್, 4ನೇ ಹಂತದಲ್ಲಿ ಥಾಣೆಯಿಂದ ಅಹಮದಾಬಾದ್ ಹಾಗೂ ಕೊನೆಯ ಹಂತದಲ್ಲಿ ಮುಂಬಯಿಯಿಂದ ಅಹಮದಾಬಾದ್ ಮಾರ್ಗ ಉದ್ಘಾಟನೆಯಾಗಲಿದೆ. ಯೋಜನೆಯನ್ನು ಹಂತ ಹಂತವಾಗಿ ಉದ್ಘಾಟನೆ ಮಾಡುವ ಮೂಲಕ ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.
ಈ ಯೋಜನೆಯಿಂದಾಗಿ ಅಹಮದಾಬಾದ್, ವಡೋದರಾ, ಭರೂಚ್, ಸೂರತ್, ವಾಪಾ, ಥಾಣೆ ಮತ್ತು ಮುಂಬಯಿ ನಗರಗಳ ಸಂಪರ್ಕ ಸುಲಭವಾಗಲಿದೆ. ಈ ಬಗ್ಗೆ ಮಾತ ನಾಡಿರುವ ವೈಷ್ಣವ್, 2027ರ ಆ. 15ರಂದು ಟಿಕೆಟ್ ಖರೀದಿಸಲು ಸಿದ್ಧರಾಗಿರಿ ಎಂದಿದ್ದಾರೆ.




