ಬೆಳಗಾವಿ: ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರ ಲಾಠಿ ಚಾರ್ಜ್ ಪ್ರಕರಣ ವಿಧಾನಸಭೆ ಹಾಗೂ ವಿಧಾನ ಪರಿಷತ್ ಉಭಯಸದನಗಳಲ್ಲಿ ಪ್ರತಿಧ್ವನಿಸಿದ್ದು, ವಿಪಕ್ಷ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈವೇಳೆ ವಿಧಾನಸಭೆಯಲ್ಲಿ ಮಾತನಾಡಿದ ಗ್ರಹ ಸಚಿವ ಡಾ.ಜಿ.ಪರಮೇಶ್ವರ್, ಪಂಚಮಸಾಲಿ ಮುಖಂಡರಿಗೆ ಟ್ರ್ಯಾಕ್ಟರ್ ತರದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಚನೆ ನೀಡಿತ್ತು. ಅಲ್ಲದೇ ಶಾಂತಿಯುತ ಪ್ರತಿಭಟನೆ ನಡೆಸುವಂತೆ ತಿಳಿಸಿದ್ದರು. ಆದಾಗ್ಯೂ ಪ್ರತಿಭಟನೆ ವೇಳೆ 20 ಟ್ರ್ಯಾಕ್ಟರ್ ಗಳನ್ನು ತಂದಿದ್ದಾರೆ. ಶಾಂತಿಯುತ ಹೋರಾಟ ಬಿಟ್ಟು ಪ್ರತಿಭಟನೆ ಉಗ್ರಸ್ವರೂಪ ಪಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದ್ದಾರೆ ಎಂದರು. ಶಾಂತಿಯುತ ಧರಣಿಗೆ ಅವಕಾಶ ಕೊಟ್ಟರೂ ಪ್ರತಿಭಟನಾಕಾರರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಹೈಕೋರ್ಟ್ ಆದೇಶ ಉಲ್ಲಂಘಿಸಲು ಮುಂದಾದಾಗ ಕಾನೂನು ಸುವವಸ್ಥೆ ಕಾಪಾಡಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಪೊಲೀಸರು ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಯಿತು. ಟ್ರ್ಯಾಕ್ಟರ್ ಗಳನ್ನು ಸುವರ್ಣ ಸೌಧದ ಆವರಣಕ್ಕೆ ಒಯ್ಯಲುಯತ್ನಿಸಿದ್ದಾರೆ. ಬ್ಯಾರಿಕೇಡ್ ಗಳನ್ನು ತಳ್ಳಿ ಪ್ರತಿಭಟನಾಕಾರರು
ಮುನ್ನುಗಿದ್ದಾರೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.