ಮೈಸೂರು : ಸಂಸತ್ನಲ್ಲಿ ಕೇಂದ್ರ ಸರ್ಕಾರ ಇಂದು ಬಜೆಟ್ ಮಂಡನೆ ಮಾಡಿದ್ದು, ರಾಜ್ಯದ ಪಾಲಿಗೆ ಕೇಂದ್ರ ಸರ್ಕಾರ ಚೊಂಬು ನೀಡುವುದನ್ನೇ ಮುಂದುವರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಈ ಬಜೆಟ್ ಬರೀ ಬಾಯಿ ಮಾತಲ್ಲಿ ಹೊಟ್ಟೆ ತುಂಬಿಸಿದಂತಿದೆ.ರಾಜಸ್ಥಾನ ಬಿಟ್ಟರೆ ಕರ್ನಾಟಕ ಹೆಚ್ಚು ಒಣಭೂಮಿ ಇರುವ ರಾಜ್ಯ. ನಮ್ಮ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪವೇ ಇಲ್ಲ ಎಂದು ಕುಟುಕಿದರು.
ಈ ಬಾರಿ ಬಜೆಟ್ನಲ್ಲಿ ರಾಯಚೂರಿಗೆ ಏಮ್ಸ್ ಘೋಷಣೆ ಮಾಡುತ್ತಾರೆ ಎಂದು ನಂಬಿದ್ವಿ. ಆದರೆ ಅದೂ ಆಗಲಿಲ್ಲ. ನಮ್ಮ ರಾಜ್ಯದ ಯೋಜನೆಗಳಿಗೆ ಬಜೆಟ್ನಲ್ಲಿ ಹಣ ನೀಡಿಲ್ಲ. ಗ್ರಾಮೀಣ ಅಭಿವೃದ್ಧಿ, ರೈಲ್ವೈ ಯೋಜನೆಗಳಿಗೂ ಹಣ ನೀಡದೇ ತಿರಸ್ಕರಿಸಿದ್ದಾರೆ.
ಬಿಹಾರ, ಆಂಧ್ರದಲ್ಲಿ ಅವರ ಮಿತ್ರಪಕ್ಷದ ಸರ್ಕಾರಗಳಿಗೆ ಹೆಚ್ಚು ನೀಡಿದ್ದಾರೆ. ಅತೀ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ನಮ್ಮದಾಗಿದ್ದರೂ ನಮಗೆ ಚೊಂಬು ಕೊಟ್ಟಿದ್ದಾರೆ. ಬೆಂಗಳೂರಿಗೂ ಯಾವ ಅನುದಾನ ನೀಡಿಲ್ಲ.
ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೂ ಗೌರವಧನ ಘೋಷಿಸಿಲ್ಲ. ನೀರಾವರಿ ಯೋಜನೆಗಳಿಗೆ ಒಂದೂ ರೂಪಾಯಿಯೂ ಕೊಟ್ಟಿಲ್ಲ. ಬೆಳೆ ವಿಮೆ ಯೋಜನೆಗೂ ಬಜೆಟ್ ಗಮನಹರಿಸಿಲ್ಲ. ಬಿಸಿನೆಸ್ ಕಾರಿಡಾರ್, ವಸತಿ ಯೋಜನೆಗೆ ಅನುದಾನ ಹೆಚ್ಚಳ ಮಾಡಿಲ್ಲ ಎಂದು ಸಿಎಂ ಮಾತಲ್ಲೇ ತಿವಿದರು.
ಸ್ಟಾರ್ಟಾಪ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸಬ್ ಕಾ ಸಾಥ್.. ಸಬ್ ಕಾ ವಿಕಾಸ್ ಯಥೇಚ್ಚವಾಗಿ ಬಳಸಿದ್ದಾರೆ. ಮೇಕ್ ಇನ್ ಇಂಡಿಯಾಗೆ ಕೇವಲ ರೂ.100 ಕೋಟಿ ಇಟ್ಟಿದ್ದಾರೆ. ಬಜೆಟ್ ದೇಶದ ಹಿತದೃಷ್ಟಿಯಿಂದ ಅದರಲ್ಲೂ ಕರ್ನಾಟಕದ ಪಾಲಿಗೆ ಬಹಳ ನಿರಾಶಾದಾಯಕವಾಗಿದೆ.
ಇದು ಯಾವುದೇ ದೂರದೃಷ್ಟಿ ಇಲ್ಲದ ಬಜೆಟ್ ಎಂದ ಸಿಎಂ, ಬಜೆಟ್ ಪೂರ್ವಭಾವಿ ಸಭೆಗೆ ನಮ್ಮನ್ನು ಕರೆದಿದ್ದರು. ನಾವು ಸಚಿವ ಕೃಷ್ಣ ಭೈರೇಗೌಡರನ್ನು ಕಳುಹಿಸಿದ್ದೆವು. ನಾವು ಸಲ್ಲಿಸಿದ್ದ ಯಾವುದೇ ಬೇಡಿಕೆಗಳನ್ನು ಬಜೆಟ್ನಲ್ಲಿ ಈಡೇರಿಸಿಲ್ಲ. ರೂ.50 ಲಕ್ಷದ 65,345 ಕೋಟಿ ಮೊತ್ತದ ಬಜೆಟ್ ಮಂಡನೆ ಮಾಡಿದ್ದಾರೆ.
ಬಜೆಟ್ನ ಗಾತ್ರ ಕಡಿಮೆಯಾಗಿದೆ. ಕಳೆದ ಬಾರಿಯ ಬಜೆಟ್ನಲ್ಲಿ ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಹಾಗಾಗಿ ಈ ಬಾರಿಯ ಬಜೆಟ್ನ ಗಾತ್ರವೂ ಕಡಿಮೆಯಾಗಿದೆ. ಕೇವಲ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಹಾರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ ಎಂದು ಆರೋಪಿಸಿದರು.
ಇನ್ನು ಕರ್ನಾಟಕದ ಬಿಜೆಪಿ ನಾಯಕರೂ ಈ ಬಗ್ಗೆ ಮಾತನಾಡಲ್ಲ. ಕೇಂದ್ರಕ್ಕೆ ರಾಜ್ಯ ಬಿಜೆಪಿ ನಾಯಕರು ನ್ಯಾಯ ಕೊಡಿ ಎಂದು ಯಾವತ್ತೂ ಕೇಳಿಲ್ಲ. ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾದರೂ ಅವರು ಎಂದೂ ಸಂಸತ್ನಲ್ಲಿ ತುಟಿ ಬಿಚ್ಚಲ್ಲ ಎಂದು ಸಿಎಂ ಗುಡುಗಿದರು.