ಬಿಲಾಸ್ಪುರ: ಕನ್ಯತ್ವ ಪರೀಕ್ಷೆಗೆ ಒಳಗಾಗುವಂತೆ ಮಹಿಳೆಯನ್ನು ಬಲವಂತಪಡಿಸುವಂತಿಲ್ಲ. ಇದು ಸಂವಿಧಾನದ 21ನೇ ವಿಧಿಯಡಿ ನೀಡಲಾಗಿರುವ ಘನತೆಯ ಹಕ್ಕಿನ ಉಲ್ಲಂಘನೆ ಎಂದು ಛತ್ತೀಸಗಢ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕನ್ಯತ್ವ ಪರೀಕ್ಷೆಗೆ ಅನುಮತಿ ನೀಡುವುದು ಮೂಲಭೂತ ಹಕ್ಕುಗಳು ಮತ್ತು ನೈಸರ್ಗಿಕ ನ್ಯಾಯದ ಪ್ರಮುಖ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ಹೇಳಿದೆ.
ತನ್ನ ಪತ್ನಿ ಬೇರೊಬ್ಬ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಆರೋಪಿಸಿ ಆಕೆಯನ್ನು ಕನ್ಯತ್ವ ಪರೀಕ್ಷೆಗೆ ಒಳಪಡಿಸುವಂತೆ ಕೋರಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ್ ಕುಮಾರ್ ವರ್ಮಾ ಅವರಿದ್ದ ಪೀಠ ವಿಚಾರಣೆ ನಡೆಸಿತು.
ತನ್ನ ಪತಿ ಲೈಂಗಿಕವಾಗಿ ಅಶಕ್ತನಾಗಿದ್ದು ಸಹಜೀವನ ನಡೆಸಲು ನಿರಾಕರಿಸಿದ್ದಾನೆ ಎಂದು ಪತ್ನಿ ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಪತಿ, ಅವಳು (ಪತ್ನಿ) ತನ್ನ ಭಾವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಕನ್ಯತ್ವ ಪರೀಕ್ಷೆಗೆ ಒಳಪಡಿಸುವಂತೆ ಕೋರಿದ್ದರು.
ಅರ್ಜಿದಾರರು ತಮ್ಮ ಮೇಲಿನ ಆರೋಪಗಳು ಆಧಾರರಹಿತವೆಂದು ಸಾಬೀತುಪಡಿಸಲು ಬಯಸಿದರೆ, ಅವರು ಸಂಬಂಧಪಟ್ಟ ವೈದ್ಯಕೀಯ ಪರೀಕ್ಷೆಗೆ ಒಳಗಾಗಬಹುದು ಅಥವಾ ಯಾವುದೇ ಇತರ ಸಾಕ್ಷಿಗಳನ್ನು ನೀಡಬಹುದು.
screenಆದರೆ ಕನ್ಯತ್ವ ಪರೀಕ್ಷೆಗೆ ಒಳಪಡಿಸುವುದು ಸಂವಿಧಾನಬಾಹಿರವಾಗಿದೆ. ಏಕೆಂದರೆ ಇದು ಸಂವಿಧಾನದ 21ನೇ ವಿಧಿಯಡಿ ನೀಡಲಾಗಿರುವ ಘನತೆಯ ಹಕ್ಕಿನ ಉಲ್ಲಂಘನೆ ಎಂದು ಹೈಕೋರ್ಟ್ ಹೇಳಿದೆ.
ಭಾರತದ ಸಂವಿಧಾನದ 21ನೇ ವಿಧಿಯು ಬದುಕುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಮಾತ್ರವಲ್ಲದೆ ಮಹಿಳೆಯರಿಗೆ ಘನತೆಯಿಂದ ಜೀವನ ನಡೆಸುವ ಹಕ್ಕನ್ನು ಸಹ ಖಾತರಿಪಡಿಸುತ್ತದೆ. ಯಾವುದೇ ಮಹಿಳೆಯನ್ನು ಕನ್ಯತ್ವ ಪರೀಕ್ಷೆಗೆ ಒಳಗಾಗುವಂತೆ ಬಲವಂತಪಡಿಸುವಂತಿಲ್ಲ.
ಸಂವಿಧಾನದ 21ನೇ ವಿಧಿ ‘ಮೂಲಭೂತ ಹಕ್ಕುಗಳ ಹೃದಯ’ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ನ್ಯಾಯಮೂರ್ತಿ ವರ್ಮಾ ಅವರಿದ್ದ ಪೀಠ ಹೇಳಿದೆ