ಕೊಪ್ಪಳ: ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಪ್ರತಿ ದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ಬೆಟ್ಟವನ್ನು ಹತ್ತಿ ಆಂಜನೇಯನ ದರ್ಶನ ಪಡೆದು ಪುನೀತರಾಗುತ್ತರೆ. ಹೀಗೆ ಅಂಜನಾದ್ರಿ ಬೆಟ್ಟ ಹತ್ತಿದ್ದ ಯುವತಿಯೊಬ್ಬಳು. ಆಕಸ್ಮಿಕವಾಗಿ ಕೆಳಗೆ ಬಿದ್ದಿರುವ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಹತ್ತಿದ ಯುವತಿ 40 ಅಡಿ ಆಳಕ್ಕೆ ಬಿದ್ದಿದ್ದು, ಕಲ್ಲುಗಳ ನಡಿವೆ ಸಿಲುಕಿಕೊಂಡಿದ್ದಾಳೆ. ಫೋಟೋ ತೆಗೆಯಲೆಂದು ಹೋಗಿ ಈ ಅವಘಡ ಸಂಭವಿಸಿದೆ.
ಬೆಟ್ಟದಿಂದ ಕೆಳಗೆ ಬೀಳುತ್ತಿದ್ದಂತೆ ಜೋರಾಗಿ ಯುವತಿ ಕಿರುಚಿಕೊಂಡಿದ್ದಾಳೆ. ತಕ್ಷಣ ಭಕ್ತರು ಬಂದು ನೋಡುವಷ್ಟರಲ್ಲಿ ಯುವತಿ ಕೆಳಗೆ ಬಿದ್ದಿದ್ದಳು. ಸ್ಥಳದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು, ಸ್ಥಳೀಯರು, ಎರಡು ಗಂಟೆ ಕಾರ್ಯಾಚರಣೆ ಮೂಲಕ ಯುವತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಯುವತಿಯನ್ನು ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಯುವತಿ ರಾಯಚೂರು ಮೂಲದ ಅಶ್ವಿನಿ ಎಂದು ಗುರುತಿಸಲಾಗಿದ್ದು, ಕೊಪ್ಪಳ ಜಿಲ್ಲಾ ಎಸ್ ಪಿ ಡಾ.ರಾಮ್ ಎಲ್ ಕೊಪ್ಪಳ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.