ಬೆಳಗಾವಿ: ತಾಲ್ಲೂಕಿನ ನಾವಗೆ ಗ್ರಾಮದ ಹೊರ ವಲಯದಲ್ಲಿರುವ ಟಿಕ್ಸೊ ಟೇಪ್ (ಅಂಟು) ಕಾರ್ಖಾನೆಯಲ್ಲಿ ಬೃಹತ್ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಒಬ್ಬ ಕಾರ್ಮಿಕ ಕಾಣೆಯಾಗಿದ್ದಾನೆ.
ಕಾರ್ಮಿಕರಾದ ಬೆಳಗಾವಿ ತಾಲ್ಲೂಕಿನ ಕವಳವಾಡಿಯ ಮಾರುತಿ ನಾರಾಯಣ ಕರವೇಕರ (32), ಜುನೇಬೆಳಗಾವಿಯ ಯಲ್ಲಪ್ಪ ಪ್ರಕಾಶ ಸಲಗುಡೆ (35), ರಾಝವಾಡಿಯ ರಂಜೀತ ದಶರಥ ಪಾಟೀಲ (39) ಗಾಯಗೊಂಡಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ, ಮೂವರ ಸ್ಥಿತಿಯೂ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಕೆಎಲ್‌ಇ ಆಸ್ಪತ್ರೆಗೆ ಸಾಗಿಸಲಾಗಿದೆ.
ಮಾರ್ಕಂಡೇಯ ನಗರದ ಯಲ್ಲಪ್ಪ (20) ಎಂಬ ಕಾರ್ಮಿಕ ಇನ್ನೂ ಕಾರ್ಖಾನೆ ಒಳಗೇ ಸಿಲುಕಿದ್ದಾರೆ ಎಂದು ಕಾರ್ಮಿಕರು ಮಾಹಿತಿ ನೀಡಿದ್ದಾರೆ.
ಯುವಕನ ಸಂಬಂಧಿಕರು ಕಾರ್ಖಾನೆ ಆವರಣದಲ್ಲಿ ಜಮಾಯಿಸಿದ್ದು ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ. ಮಗನನ್ನು ರಕ್ಷಿಸುವಂತೆ ದೇವರಲ್ಲಿ ಅಂಗಲಾಚುತ್ತಿದ್ದಾರೆ.ಬೆಂಕಿ ಅವಘಡದ ಮಾಹಿತಿ ಕಾಳ್ಗಿಚ್ಚಿನಂತೆ ಹರಡಿದ್ದು ಸುತ್ತಮುತ್ತಲಿನ ಅಪಾರ ಜನ ಸ್ಥಳಕ್ಕೆ ಧಾವಿಸಿದ್ದಾರೆ.
ಸ್ನೇಹಂ ಹೆಸರಿನ ಈ ಕಾರ್ಖಾನೆಯಲ್ಲಿ ಮೂರು ಶಿಫ್ಟ್‌ಗಳಲ್ಲಿ ತಲಾ 74 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಬೆಂಕಿ ಅವಘಡ ಸಂಭವಿಸಿದ್ದರಿಂದ ಒಳಗೆ ಎಷ್ಟು ಜನರಿದ್ದಾರೆ, ಎಷ್ಟು ಜನ ಪರಾರಿಯಾಗಿದ್ದಾರೆ ತಿಳಿಯುತ್ತಿಲ್ಲ ಎಂದು ನಾವಗೆ ಗ್ರಾಮಸ್ಥರು ತಿಳಿಸಿದ್ದಾರೆ.
ಬೆಂಕಿ ಕೆನ್ನಾಲಿಗೆ ಎಷ್ಟು ಭೀಕರವಾಗಿದೆ ಎಂದರೆ ಅಗ್ನಿಶಾಮಕ ವಾಹನಗಳು ಹತ್ತಿರ ಸುಳಿಯಲೂ ಆಗುತ್ತಿಲ್ಲ. ಪೊಲೀಸರು, ಗ್ರಾಮಸ್ಥರು, ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಕಾರ್ಖಾನೆಯ ಲಿಫ್ಟ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿತ್ತು. ಅಲ್ಲಿ ಹೊತ್ತಿಕೊಂಡ ಬೆಂಕಿ ಕೆಲವೇ ಕ್ಷಣಗಳಲ್ಲಿ ಇಡೀ ಕಾರ್ಖಾನೆ ಆವರಿಸಿತು. ಟಿಕ್ಸೊ ಟೇಪ್‌ಗೆ ಬಳಸಲು ಸಲಕರಣೆಗಳಲ್ಲಿ ಕೆಲವು ಅಗ್ನಿ ಹೆಚ್ಚಾಗಲು ಅನುಕೂಲಕರವಾಗಿದ್ದವು. ಬೆಂಕಿ ಕಂಡು ಕಾರ್ಮಿಕರು ದಿಕ್ಕಾಪಾಲಾಗಿ ಓಡಿದರು ಎಂದೂ ಗ್ರಾಮಸ್ಥರು ತಿಳಿಸಿದ್ದಾರೆ.