ಹುಬ್ಬಳ್ಳಿ: ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿ ಇಲ್ಲ, ಆದರೆ ಕಾಂಗ್ರೆಸ್ ಸರ್ಕಾರ ಓಬಿಸಿಗಳಿಗೆ ನೀಡಲಾದ ಮೀಸಲಾತಿ ಕಸಿದು ಮುಸ್ಲಿಂರಿಗೆ ನೀಡುತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ ಆರೋಪಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಓಬಿಸಿಗಳಿಗೆ ನೀಡಲಾದ ಶೇ.32 ಮೀಸಲಾತಿಯಲ್ಲಿ ಶೇ. 23 ರಷ್ಟು ಮೀಸಲಾತಿಯನ್ನು ಮುಸ್ಲಿಂರಿಗೆ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಸರ್ಕಾರ ಮಾಡಿದ್ದ ಮೀಸಲಾತಿಯಲ್ಲಿನ ಬದಲಾವಣೆಗಳನ್ನು ಪ್ರಶ್ನಿಸಿ ಬೇರೊಬ್ಬರ ಮೂಲಕ ನ್ಯಾಯಾಲಯಕ್ಕೆ ಹೋಗಿ ಕಾಂಗ್ರೆಸ್ ಸರ್ಕಾರ ಪಂಚಮಸಾಲಿಗಳು ಹಾಗೂ ಉಳಿದ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂದು ಹೇಳಿದರು.
ಓಬಿಸಿ ಮೀಸಲಾತಿಯನ್ನು ಮುಸ್ಲಿಂರಿಗೆ ನೀಡುವ ಕುರಿತು ರಾಜ್ಯದಲ್ಲಿ ನಾವೇ ಧ್ವನಿ ಎತ್ತಿದ್ದೇವು. ಇದೀಗ ಈ ವಿಷಯ ದೇಶದಾದ್ಯಂತ ಚರ್ಚೆ ಆಗುತ್ತಿದೆ. ಮುಸ್ಲಿಂರನ್ನು ಸೆಂಟ್ರಲ್ ಓಬಿಸಿ ಲಿಸ್ಟ್’ಗೆ ಸೇರಿಸುವ ರಾಜ್ಯ ಸರ್ಕಾರದ ಶಿಫಾರಸ್ಸನ್ನು ರಾಷ್ಟ್ರೀಯ ಓಬಿಸಿ ಆಯೋಗ ತಿರಸ್ಕಾರ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ಸರ್ಕಾರ ಮೀಸಲಾತಿಯಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸುತ್ತೇವೆ ಎಂದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ನಾವು ಯಾವುದೇ ಆಪರೇಷನ್ ಮಾಡುವ ಅಗತ್ಯವಿಲ್ಲ, ಅವರು ತಮ್ಮೊಳಗೆ ಕಚ್ಚಾಟ ಮಾಡಿಕೊಂಡು ಬೀಳಲಿದ್ದಾರೆ ಎಂದು ತಿಳಿಸಿದರು.
ಸುಧೀರ್ ಕುಲಕರ್ಣಿ