ದಾವಣಗೆರೆ: ಬೇಸಿಗೆ ಆರಂಭ ಆಗುತ್ತಿದೆ. ಅಂತರ್ಜಲ ಮಟ್ಟ ಇಳಿಕೆಯಾಗಿ, ನೀರಿನ ಮೂಲಗಳು ಬತ್ತಿ ಹೋಗುತ್ತಿವೆ. ಇದರಿಂದಾಗಿ ಜೀವಜಲಕ್ಕಾಗಿ ಹಾಹಾಕಾರ ಎದುರಾಗದಿರಲಿ ಎಂದು ಗ್ರಾಮಸ್ಥರೇ ಸೇರಿಕೊಂಡು ಬೃಹತ್ ಕೆರೆ ನಿರ್ಮಾಣ ಮಾಡಿದ್ದಾರೆ.
ಹೌದು, ದಾವಣಗೆರೆ ತಾಲೂಕಿನ ಮಲ್ಲಾಪುರ ಗ್ರಾಮದ ಜನರು ಗ್ರಾಮದಲ್ಲಿದ್ದ ಪುಟ್ಟ ಹೊಂಡವನ್ನು ಬೃಹತ್ ಕೆರೆಯಾಗಿ ಬದಲಾಯಿಸಿದ್ದಾರೆ. ಹೊಂಡದ ಅಕ್ಕಪಕ್ಕದ 5-6 ಎಕರೆ ಗೋಮಾಳ ಜಾಗವನ್ನು ಆಯಾ ರೈತರಿಂದ ಪಡೆದು 20 ಅಡಿ ಆಳದ ಕೆರೆ ನಿರ್ಮಾಣ ಮಾಡಿದ್ದಾರೆ. ಈ ಕಾರ್ಯದಲ್ಲಿ ಗ್ರಾಮೀಣಾಭಿವೃದ್ಧಿ ಸಂಸ್ಥೆ (ಧರ್ಮಸ್ಥಳ ಸಂಘ), ಜಿಲ್ಲಾ ಪಂಚಾಯತಿಯು ಗ್ರಾಮಸ್ಥರಿಗೆ ಬೆನ್ನೆಲುಬಾಗಿ ನಿಂತಿವೆ.
ದಾವಣಗೆರೆ ತಾಲೂಕಿನ ಮಲ್ಲಾಪುರ ಗ್ರಾಮ 2023ರಲ್ಲಿ ಭೀಕರ ಬರಗಾಲಕ್ಕೆ ತುತ್ತಾಗಿತ್ತು. ಅಂದು ಹನಿ ನೀರಿಗಾಗಿ ಈ ಗ್ರಾಮಸ್ಥರು ಪರಿತಪಿಸಿದ್ದ ದಿನಗಳು ಮಾತ್ರ ಭೀಕರ. ಜನ-ಜಾನುವಾರು ಮತ್ತು ಕೃಷಿಗೆ ನೀರಿಲ್ಲದೇ ಗ್ರಾಮಸ್ಥರು ಹೈರಾಣಾಗಿದ್ದರು. ಅಂತಹ ದುಸ್ಥಿತಿ ಮುಂದೆ ಬರದಂತೆ ಗ್ರಾಮಸ್ಥರೇ ಸಭೆ ಸೇರಿ, ಚಿಕ್ಕ ಹೊಂಡದಂತಿದ್ದ (ಗೋಕಟ್ಟೆ) ಸ್ಥಳವನ್ನು ಐದಾರು ಎಕರೆಯಲ್ಲಿ ಬೃಹತ್ ಕೆರೆ ನಿರ್ಮಾಣ ಮಾಡಲು ನಿರ್ಧರಿಸಿದ್ದರು. ಅದರಂತೆ ಈಗ ಕೆರೆ ನಿರ್ಮಾಣವಾಗಿದೆ.
ಕೆರೆ ನಿರ್ಮಾಣದಿಂದ ನೂರಾರು ಬೋರ್ವೆಲ್ ರಿಚಾರ್ಜ್: “ಈ ಕೆರೆ ನಿರ್ಮಾಣದಿಂದ ರೈತರಿಗೆ ಉಪಯೋಗವಾಗಿದೆ. ಕೆರೆಯಲ್ಲಿ ನೀರು ಶೇಖರಣೆಯಾಗಿ ನೂರಾರು ಬೋರ್ವೆಲ್ ರಿಚಾರ್ಜ್ ಆಗಿ ರೈತರು ರಾಗಿ ಬೆಳೆದಿದ್ದಾರೆ. ಚಿಕ್ಕ ಹೊಂಡದ ಅಕ್ಕಪಕ್ಕ ಇದ್ದ ಕಣದ ಭೂಮಿಯನ್ನು 15 ರೈತರು ಬಿಟ್ಟು ಕೊಟ್ಟಿದ್ದಾರೆ. ಗ್ರಾಮಸ್ಥರೇ ಹಣ ಹಾಕಿಕೊಂಡು ಹಿಟಾಚಿ ಟ್ರ್ಟ್ಯಾಕ್ಟರ್ ಬಳಸಿ ಕೆರೆ ಕಟ್ಟಿದ್ದೇವೆ. ಎಲ್ಲ ಖರ್ಚನ್ನು ರೈತರೇ ಭರಿಸುತ್ತಿದ್ದಾರೆ” ಎಂದು ಗ್ರಾ.ಪಂ ಸದಸ್ಯರೊಬ್ಬರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ, ಸಿಇಒ ಭೇಟಿ, ಪ್ರಶಂಸೆ: ಕೆರೆ ನಿರ್ಮಾಣದ ರೈತರಿಗೆ ಜಿಲ್ಲಾಡಳಿತ ಬೆನ್ನೆಲುಬಾಗಿ ನಿಂತಿದೆ. ಅಲ್ಲದೆ ಜಿಲ್ಲಾಧಿಕಾರಿ ಗಂಗಾಧರ್ ಸ್ವಾಮಿ ಜಿ.ಎಂ, ಜಿ.ಪಂ.ಸಿಇಒ ಸುರೇಶ್ ಬಿ.ಇಟ್ನಾಳ್ ಅವರು ಮಲ್ಲಾಪುರ ಗ್ರಾಮಕ್ಕೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದರು.
ಸಿಇಒ ಸುರೇಶ್ ಬಿ.ಇಟ್ನಾಳ್ ಪ್ರತಿಕ್ರಿಯಿಸಿ, “ಕೆರೆ ನಿರ್ಮಾಣ ಮಾಡಲು ಆದೇಶ ಇತ್ತು. ಆಲೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಲ್ಲಾಪುರ ಗ್ರಾಮದಲ್ಲಿ ಗೋ ಕಟ್ಟೆ ಇತ್ತು. ಪಕ್ಕದಲ್ಲಿದ್ದ ಗೋಮಾಳ ಜಾಗವನ್ನು ಸೇರಿಸಿ ಆರು ಎಕರೆ ಜಾಗದಲ್ಲಿ ಹೊಸ ಕೆರೆ ನಿರ್ಮಾಣ ಮಾಡುತ್ತಿದ್ದೇವೆ. ಗ್ರಾಮಸ್ಥರು ಬಳಕೆ ಮಾಡ್ತಿದ್ದ ಕಣಗಳನ್ನು ಬಿಟ್ಟುಕೊಟ್ಟು ಕೆರೆ ಮಾಡಲು ಸಹಕರಿಸಿದ್ದಾರೆ ಎಂದರು.