ಹೈದರಾಬಾದ್: ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರು ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಆರ್ಥಿಕವಾಗಿಯೂ ಬಹಳ ಸಂಕಷ್ಟದಲ್ಲಿದ್ದಾರೆ. ಇದನ್ನು ಮನಗಂಡಿರುವ ಭಾರತದ ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಸಹಾಯಕ್ಕೆ ಧಾವಿಸಿದ್ದಾರೆ. ಗವಾಸ್ಕರ್ ಅವರು ಕಾಂಬ್ಳಿ ಅವರಿಗೆ ಪ್ರತಿ ತಿಂಗಳು 30 ಸಾವಿರ ರೂಪಾಯಿ ನೀಡಲು ನಿರ್ಧರಿಸಿದ್ದಾರೆ.
ಕಳೆದ ವರ್ಷ ಅಂದರೆ 2024ರ ಡಿಸೆಂಬರ್‌ನಲ್ಲಿ ಮೂತ್ರದ ಸೋಂಕು ಮತ್ತು ಸ್ನಾಯು ಸೆಳೆತದಿಂದ ಕಾಂಬ್ಳಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು ಎರಡು ವಾರಗಳ ಕಾಲ ಮಹಾರಾಷ್ಟ್ರದ ಥಾಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆರೋಗ್ಯ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಜನವರಿ 1ರಂದು ಡಿಸ್ಚಾರ್ಜ್ ಆಗಿದ್ದರು.
ಕಳೆದ ಕೆಲವು ವರ್ಷಗಳಿಂದಲೂ ಕಾಂಬ್ಳಿ ಅವರನ್ನು ಹಲವಾರು ಆರೋಗ್ಯ ಸಮಸ್ಯೆಗಳು ಇನ್ನಿಲ್ಲದಂತೆ ಕಾಡುತ್ತಿವೆ. ಇದು ಅವರನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೂ ತಳ್ಳಿವೆ. 2013ರಲ್ಲಿ ಎರಡು ಹೃದಯ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಕ್ರಿಕೆಟ್ ದೇವರು ಖ್ಯಾತಿಯ ಸಚಿನ್ ತೆಂಡೂಲ್ಕರ್ ಅವರೂ ಸ್ವಲ್ಪ ಮಟ್ಟಿನ ಹಣಕಾಸು ಸಹಾಯ ಒದಗಿಸಿದ್ದರು.
ಕಳೆದ ಡಿಸೆಂಬರ್‌ನಲ್ಲಿ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆದ ಹಿರಿಯ ಕ್ರಿಕೆಟ್ ತರಬೇತುದಾರ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕ ಉದ್ಘಾಟನಾ ಸಮಾರಂಭದಲ್ಲಿ ಕಾಂಬ್ಳಿ ಭಾಗವಹಿಸಿ ವಿಶೇಷವಾಗಿ ಗಮನ ಸೆಳೆದಿದ್ದರು. ಇದೇ ಕಾರ್ಯಕ್ರಮದಲ್ಲಿ ಸಚಿನ್ ತೆಂಡೂಲ್ಕರ್ ಕೂಡ ಉಪಸ್ಥಿತರಿದ್ದರು.
ಕಾಂಬ್ಳಿ ಅನಾರೋಗ್ಯ ಸಂಕಷ್ಟದ ಕುರಿತು ಮಾತನಾಡಿದ್ದ ಸುನಿಲ್ ಗವಾಸ್ಕರ್, 1983ರ ವಿಶ್ವಕಪ್ ತಂಡವು ಎಡಗೈ ಬ್ಯಾಟ್ಸ್‌ಮನ್ ಕಾಂಬ್ಳಿ ಅವರಿಗೆ ಬೆಂಬಲ ನೀಡಲಿದೆ ಎಂದು ಹೇಳಿದ್ದರು. ಇದೀಗ ಅವರು ತಮ್ಮ ಭರವಸೆಯನ್ನು ಈಡೇರಿಸಿದ್ದಾರೆ.
ಗವಾಸ್ಕರ್ ಅವರು ಚಾಂಪ್ಸ್ ಫೌಂಡೇಶನ್ ನಡೆಸುತ್ತಿದ್ದು, ಅಗತ್ಯವಿರುವ ಮಾಜಿ ಅಂತಾರಾಷ್ಟ್ರೀಯ ಆಟಗಾರರಿಗೆ ಸಹಾಯಹಸ್ತ ಚಾಚುತ್ತಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, 1999ರಲ್ಲಿ ಪ್ರಾರಂಭವಾದ ಚಾಂಪ್ಸ್ ಫೌಂಡೇಶನ್ ಇದೀಗ ಕಾಂಬ್ಳಿ ಅವರ ಸಹಾಯಕ್ಕೆ ಬಂದಿದೆ. ಏಪ್ರಿಲ್ 1ರಿಂದ ಕಾಂಬ್ಳಿ ಜೀವನಕ್ಕಾಗಿ ಪ್ರತಿ ತಿಂಗಳು 30,000 ರೂ. ಸಹಾಯ ನೀಡಲಿದೆ. ಇದಲ್ಲದೆ, 30,000 ರೂ.ಗಳನ್ನು ವೈದ್ಯಕೀಯ ಸಹಾಯದ ರೂಪದಲ್ಲಿಯೂ ನೀಡಲಿದೆ.
ಈ ವರ್ಷಾರಂಭದಲ್ಲಿ (ಜನವರಿ) ಮುಂಬೈನ ವಾಂಖೆಡೆ ಸ್ಟೇಡಿಯಂನ 50ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾಂಬ್ಳಿ ಅವರು ಗವಾಸ್ಕರ್‌ರನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಕಾಂಬ್ಳಿಗೆ ನಡೆಯಲು ಕೂಡಾ ಕಷ್ಟವಾಗುತ್ತಿತ್ತು. ಹೀಗಿದ್ದರೂ ಗವಾಸ್ಕರ್ ಪಾದಗಳನ್ನು ಸ್ಪರ್ಶಿಸಿ ವಿಶೇಷ ಆದರ ತೋರಿಸಿದ್ದರು. ವಿನೋದ್ ಕಾಂಬ್ಳಿ ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ. 17 ಟೆಸ್ಟ್ ಮತ್ತು 104 ಏಕದಿನ ಪಂದ್ಯಗಳನ್ನು ಕಾಂಬ್ಳಿ ಆಡಿದ್ದಾರೆ.