ಪುಣೆ: ಕೇವಲ 11 ದಿನಗಳಲ್ಲಿ ಹೂಡಿಕೆ ಮಾಡಿದ ಹಣವನ್ನು ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ, ಪುಣೆಯ ಹಿರಿಯ ವೈದ್ಯರೊಬ್ಬರಿಂದ ಸೈಬರ್ ವಂಚಕರು ಬರೋಬ್ಬರಿ 12.31 ಕೋಟಿ ರೂಪಾಯಿ ಲೂಟಿ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಇದು ಪುಣೆಯಲ್ಲಿ ಈ ವರ್ಷ ನಡೆದ ಎರಡನೇ ಅತಿದೊಡ್ಡ ಸೈಬರ್ ವಂಚನೆ ಪ್ರಕರಣ ಎಂದು ಪೊಲೀಸರು ತಿಳಿಸಿದ್ದಾರೆ.ಈ ವರ್ಷದ ಜನವರಿ ತಿಂಗಳಲ್ಲಿ ಸಂತ್ರಸ್ತ ವೈದ್ಯರಿಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್ ಸಂದೇಶವೊಂದು ಬಂದಿತ್ತು.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ಗಳಿಸಬಹುದು ಎಂದು ಅದರಲ್ಲಿ ಆಮಿಷವೊಡ್ಡಲಾಗಿತ್ತು. ವೈದ್ಯರು ಆಸಕ್ತಿ ತೋರಿಸಿದ ಕೂಡಲೇ, ವಂಚಕರು ಅವರನ್ನು “VIP Stock 24” ಎಂಬ ವಾಟ್ಸಾಪ್ ಗ್ರೂಪ್ಗೆ ಸೇರಿಸಿದ್ದರು.
ಅಲ್ಲದೆ ಈ ಗ್ರೂಪ್ನಲ್ಲಿ ಶೇರ್ ಮಾರ್ಕೆಟ್ ಹೂಡಿಕೆಯಿಂದ ದೊಡ್ಡ ಲಾಭ ಪಡೆಯುವ ಬಗ್ಗೆ ನಕಲಿ ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತಿತ್ತು, ಹೂಡಿಕೆ ಮಾಡಿದ ಹಣಕ್ಕೆ ಕೇವಲ 11 ದಿನಗಳಲ್ಲಿ ಕೋಟ್ಯಂತರ ರೂಪಾಯಿ ಲಾಭ ಸಿಗುತ್ತದೆ ಮತ್ತು 8-10% ವರೆಗೆ ರಿಟರ್ನ್ಸ್ ಬರುತ್ತದೆ ಎಂದು ನಂಬಿಸಲಾಗಿತ್ತು.
ವಂಚಕರು ನೀಡಿದ ಲಿಂಕ್ ಮೂಲಕ ವೈದ್ಯರು ಒಂದು ನಕಲಿ ಟ್ರೇಡಿಂಗ್ ಆಯಪ್ ಡೌನ್ಲೋಡ್ ಮಾಡಿಕೊಂಡಿದ್ದರು. ಆರಂಭದಲ್ಲಿ ಸ್ವಲ್ಪ ಹಣ ಹೂಡಿಕೆ ಮಾಡಿದಾಗ ಆಯಪ್ನಲ್ಲಿ ದೊಡ್ಡ ಮೊತ್ತದ ಲಾಭ ತೋರಿಸಲಾಗಿತ್ತು. ಇದನ್ನು ನಂಬಿದ ವೈದ್ಯರು ಹಂತ ಹಂತವಾಗಿ ಸುಮಾರು 39 ದಿನಗಳಲ್ಲಿ 12 ಕೋಟಿಗೂ ಅಧಿಕ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು.
ವೈದ್ಯರು ತಮ್ಮ ಲಾಭದ ಹಣವನ್ನು ಡ್ರಾ ಮಾಡಲು ಪ್ರಯತ್ನಿಸಿದಾಗ, ವಂಚಕರು ಮತ್ತಷ್ಟು ಹಣ ಪಾವತಿಸುವಂತೆ ಒತ್ತಾಯಿಸಿದರು. ಒಂದು ಹಂತದಲ್ಲಿ ವೈದ್ಯರು ಹಣ ನೀಡಲು ನಿರಾಕರಿಸಿದಾಗ, ಅವರ ಆಸ್ತಿಯನ್ನು ಜಪ್ತಿ ಮಾಡುವುದಾಗಿ ವಂಚಕರು ಬೆದರಿಕೆ ಹಾಕಿದ್ದರು.
ಆಯಪ್ನಲ್ಲಿ ವೈದ್ಯರ ಲಾಭ 54 ಕೋಟಿ ರೂಪಾಯಿ ಎಂದು ತೋರಿಸುತ್ತಿತ್ತಾದರೂ, ಅದು ಕೇವಲ ಅಂಕಿ-ಅಂಶವಾಗಿತ್ತು. ಕೊನೆಗೆ ತಾನು ಹೂಡಿಕೆ ಮಾಡಿದ ಹಣವೂ ಕೈಗೆ ಸಿಗದೇ ಇದ್ದಾಗ ತಾನು ವಂಚನೆಗೆ ಒಳಗಾಗಿರುವುದು ಅರಿವಾಗಿದೆ ಕೂಡಲೇ ವೈದ್ಯರು ಪುಣೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.




