ಸೂರ್ಯಗ್ರಹಣ ಅಪರೂಪದ ಖಗೋಳ ಘಟನೆಗಳಲ್ಲಿ ಒಂದು. ಶೀಘ್ರದಲ್ಲೇ ಭೂಮಿ ಮೇಲೆ ವಾಸಿಸುವ ಜನರು ಸೂರ್ಯಗ್ರಹಣವನ್ನು ವೀಕ್ಷಿಸಲಿದ್ದಾರೆ. ಹೌದು, ಮಾರ್ಚ್ 29ರ ಶನಿವಾರ ಸೂರ್ಯಗ್ರಹಣ ಗೋಚರಿಸಲಿದೆ.
ಈ ವರ್ಷದ ಸೂರ್ಯಗ್ರಹಣವನ್ನು ನೀವು ಭಾರತದಲ್ಲಿ ನೋಡಬಯಸಿದರೆ ನಿರಾಶೆ ಗ್ಯಾರಂಟಿ. ಏಕೆಂದರೆ, ಇದು ಭಾರತದಲ್ಲಿ ಕಾಣಿಸುವುದಿಲ್ಲ. ಪೂರ್ವ ಕೆನಡಾ ಮತ್ತು ಈಶಾನ್ಯ ಯುನೈಟೆಡ್ ಸ್ಟೇಟ್ಸ್‌ನ ಜನರು ಭಾಗಶಃ ಗ್ರಹಣ ನೋಡಲು ಸಾಧ್ಯವಾಗುತ್ತದೆ. ಏಪ್ರಿಲ್ 8, 2024ರಂದು ಉತ್ತರ ಅಮೆರಿಕದಲ್ಲಿ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಿತ್ತು.
ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿದಾಗ ಅದನ್ನು ‘ಸಂಪೂರ್ಣ ಸೂರ್ಯಗ್ರಹಣ’ ಎನ್ನುವರು. ಆದರೆ ಅದು ಸಂಪೂರ್ಣವಾಗಿ ಆವರಿಸಲು ಸಾಧ್ಯವಾಗದಿದ್ದಾಗ ‘ಭಾಗಶಃ ಸೂರ್ಯಗ್ರಹಣ’ ಎಂದು ಕರೆಯಲಾಗುತ್ತದೆ.
ಮಾರ್ಚ್ 29, 2025ರಂದು ನಡೆಯುವ ಸೂರ್ಯಗ್ರಹಣವು ಭಾಗಶಃ ಸೂರ್ಯಗ್ರಹಣವಾಗಿದೆ. ಈ ಸಮಯದಲ್ಲಿ ಚಂದ್ರನು ಸೂರ್ಯನ ಸುಮಾರು ಶೇ 93ರಷ್ಟು ಭಾಗವನ್ನು ಆವರಿಸುತ್ತಾನೆ. ಈ ಸಮಯದಲ್ಲಿ ಸಂಪೂರ್ಣ ಸೂರ್ಯಗ್ರಹಣದಂತೆ ಕಾಣುತ್ತದೆ. ಆದರೆ ಸಂಪೂರ್ಣ ಸೂರ್ಯಗ್ರಹಣವಲ್ಲ.
ಈ ವಿದ್ಯಮಾನ ಉತ್ತರ ಅಮೆರಿಕದ ಕೆಲವು ಭಾಗಗಳಲ್ಲಿ ಸೂರ್ಯೋದಯದ ನಂತರ ಸ್ವಲ್ಪ ಸಮಯದಲ್ಲಿ ಗೋಚರಿಸುತ್ತದೆ. ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್, ಯುರೋಪ್ ಮತ್ತು ವಾಯುವ್ಯ ಆಫ್ರಿಕಾದ ಕೆಲವು ಭಾಗಗಳಲ್ಲಿ ಗೋಚರಿಸಲಿದೆ. ವಾಯುವ್ಯ ರಷ್ಯಾದ ಜನರು ತಮ್ಮ ಸಮಯದ ಪ್ರಕಾರ ದಿನದ ಕೊನೆಯಲ್ಲಿ ಪ್ರಕೃತಿ ವಿಸ್ಮಯವನ್ನು ನೋಡಲು ಸಾಧ್ಯವಿದೆ.
ಬರಿಗಣ್ಣಿಂದ ನೋಡುವ ಸಾಹಸ ಬೇಡ: ಸೂರ್ಯಗ್ರಹಣವನ್ನು ಎಂದಿಗೂ ಬರಿಗಣ್ಣಿನಿಂದ ನೋಡಬಾರದು. ಗ್ರಹಣ ವೀಕ್ಷಿಸಲು ಹಲವು ವಿಶೇಷ ರೀತಿಯ ಕನ್ನಡಕಗಳು ಲಭ್ಯವಿದೆ. ಸಂಪೂರ್ಣ ಸೂರ್ಯಗ್ರಹಣ ಸಂಭವಿಸಿದಾಗ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸುವ ಕೆಲವು ನಿಮಿಷಗಳ ಅವಧಿ ಇರುತ್ತದೆ. ಈ ಸಮಯದಲ್ಲಿ, ಅದು ಕತ್ತಲೆಯಾಗುತ್ತದೆ ಮತ್ತು ತಾಪಮಾನದಲ್ಲಿ ಕುಸಿತ ಕಂಡುಬರುತ್ತದೆ.
ನಾವು ಸೂರ್ಯನ ಕರೋನವನ್ನೂ ನೋಡಬಹುದು. ಈ ವೇಳೆ ನೀವು ಸೂರ್ಯಗ್ರಹಣವನ್ನು ನೇರವಾಗಿ ವೀಕ್ಷಿಸಬಹುದು. ಮಾರ್ಚ್ 29ರಂದು ಸಂಭವಿಸುವ ಸೂರ್ಯಗ್ರಹಣ ಭಾಗಶಃ, ಆದ್ದರಿಂದ ತಪ್ಪಾಗಿಯಾದರೂ ಬರಿಗಣ್ಣಿನಿಂದ ನೋಡಬೇಡಿ. ಹೀಗೆ ಮಾಡುವುದರಿಂದ ಕಣ್ಣುಗಳಿಗೆ ಗಂಭೀರ ಹಾನಿಯಾಗುತ್ತದೆ ಎನ್ನುತ್ತಾರೆ ತಜ್ಞರು.
ಸೂರ್ಯಗ್ರಹಣ ಯಾವಾಗ ಮತ್ತು ಎಲ್ಲಿ ಗೋಚರ?: ಭೂಮಿಯ ಮೇಲೆ ಭಾಗಶಃ ಸೂರ್ಯಗ್ರಹಣ ಸುಮಾರು ನಾಲ್ಕು ಗಂಟೆಗಳ ಕಾಲ ಇರುತ್ತದೆ. ಭಾರತೀಯ ಕಾಲಮಾನದ ಪ್ರಕಾರ, ಮಧ್ಯಾಹ್ನ 2:20 ರಿಂದ ಸಂಜೆ 6:30 ರವರೆಗೆ ಸಂಭವಿಸಲಿದೆ. ಕೆನಡಾದ ಉತ್ತರ ಕ್ವಿಬೆಕ್‌ನಲ್ಲಿ ಅತ್ಯುತ್ತಮ ನೋಟವನ್ನು ಕಾಣಬಹುದು. ಇಲ್ಲಿ ಚಂದ್ರನು ಸೂರ್ಯನ ಶೇ.93.1ರಷ್ಟನ್ನು ಆವರಿಸುತ್ತಾನೆ. ಈ ಪ್ರದೇಶದಲ್ಲಿ ಸೂರ್ಯೋದಯದ ಸಮಯದಲ್ಲಿ ಗ್ರಹಣ ಗೋಚರಿಸುತ್ತದೆ.
ಪೂರ್ವ ಅಮೆರಿಕದಲ್ಲಿ ಸೂರ್ಯ ಶೇ.85ರಷ್ಟು ಆವರಿಸಿ ಕಾಣಿಸಿಕೊಳ್ಳುತ್ತಾನೆ. ಇದು ಉತ್ತರ ರಾಜ್ಯವಾದ ಮೈನೆಯಲ್ಲಿ ಮಾತ್ರ ಸಂಭವಿಸುತ್ತದೆ. ಪೂರ್ವ ಕರಾವಳಿಯ ಹೆಚ್ಚಿನ ಜನಸಂಖ್ಯೆಗೆ ಇದನ್ನು ನೋಡಲು ಸಾಧ್ಯವಾಗುವುದಿಲ್ಲ. ಐಸ್ಲ್ಯಾಂಡ್‌ನ ರೇಕ್‌ಜಾವಿಕ್‌ನಲ್ಲಿ ಸೂರ್ಯನ ಶೇ.67ರಷ್ಟು ಭಾಗ ಚಂದ್ರನಿಂದ ಆವರಿಸಲ್ಪಡಲಿದ್ದು, ಡಬ್ಲಿನ್‌ನಲ್ಲಿ ಶೇ.41ರಷ್ಟು, ಲಂಡನ್‌ನಲ್ಲಿ ಶೇ.30ರಷ್ಟು, ಪ್ಯಾರಿಸ್‌ನಲ್ಲಿ ಶೇ.23ರಷ್ಟು ಮತ್ತು ಬರ್ಲಿನ್‌ನಲ್ಲಿ ಶೇ.15ರಷ್ಟು ಭಾಗ ಚಂದ್ರನಿಂದ ಆವರಿಸಲ್ಪಡಲಿದೆ. ಹೀಗೆ ಈ ದೇಶಗಳಲ್ಲಿ ಮಾತ್ರ ಸೂರ್ಯಗ್ರಹಣವನ್ನು ನೋಡಲು ಸಾಧ್ಯವಾಗುತ್ತದೆ.