ಜಮೀನಿಗೆ ರಸ್ತೆ ನಿರ್ಮಿಸಲು ಲಂಚ ಕೇಳಿದ ಅಧಿಕಾರಿಗಳ ವಿರುದ್ಧ ರೈತರೊಬ್ಬರು ವಿನೂತನವಾಗಿ ಪ್ರತಿಭಟಿಸಿದ್ದಾರೆ. ತಾನು ಬೆಳೆದ ಮೂಲಂಗಿಯನ್ನೇ ತಾಲೂಕು ಕಚೇರಿಗೆ ತೆಗೆದುಕೊಂಡು ಬಂದ ರೈತ ಪ್ರಸನ್ನಕುಮಾರ್ ನನ್ನ ಬಳಿ ಹಣವಿಲ್ಲ, ಬೆಳೆದ ಮೂಲಂಗಿಯನ್ನು ಅಧಿಕಾರಿಗಳಿಗೆ ಕೊಡುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ದ್ವಿಚಕ್ರ ವಾಹನದಲ್ಲಿ ಮೂಲಂಗಿ ತರಕಾರಿಯನ್ನು ತೆಗೆದುಕೊಂಡು ಬಂದ ತಾಲೂಕಿನ ಜಕ್ಕೇನಹಳ್ಳಿ ಗ್ರಾಮದ ರೈತ ಪ್ರಸನ್ನಕುಮಾರ್ ತಾಲೂಕು ಕಚೇರಿಯ ಮುಂದೆ ಮೈಕ್ ಹಿಡಿದು ನನಗೆ ಲಂಚ ನೀಡಲು ಹಣವಿಲ್ಲ, ಬದಲಿಗೆ ನಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡುತ್ತೇನೆ ಬನ್ನಿ ಎಂದು ಕೂಗಿದ್ದಾರೆ.
ತನ್ನ ಜಮೀನಿಗೆ ರಸ್ತೆ ಇಲ್ಲದ ಕಾರಣ ರಸ್ತೆ ಮಾಡಿಕೊಡಲು 2 ವರ್ಷದ ಹಿಂದೆ ಅವರು ಅರ್ಜಿ ನೀಡಿ ಮನವಿ ಮಾಡಿದ್ದರು. ಆದರೆ ಅಧಿಕಾರಿಗಳು ದಿನಕ್ಕೊಂದು ಕಾರಣ ಹೇಳಿ ಅವರನ್ನು ಸತಾಯಿಸಿದ್ದಾರೆ.
ನಕ್ಷೆಯಲ್ಲಿ ನನ್ನ ಜಮೀನಿಗೆ ಹೋಗಲು ರಸ್ತೆ ಇದೆ. ಆದರೆ ಆ ರಸ್ತೆ ಒತ್ತುವರಿಯಾಗಿದೆ. ಆದ್ದರಿಂದ ಜಮೀನಿಗೆ ತೆರಳಲು ಹೊಸ ದಾರಿಯನ್ನೂ ಮಾಡಿಕೊಡುವಂತೆ ಅಥವಾ ಒತ್ತುವರಿ ತೆರವು ಮಾಡುವಂತೆ ಮನವಿ ಮಾಡಿದ್ದೆ. ಹೀಗಾಗಿ ತಹಶೀಲ್ದಾರ್ ಅವರು ಸ್ಥಳೀಯ ಅಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಿದರೂ ಯಾವುದೇ ಕೆಲಸ ಆಗಿಲ್ಲ. ಅಷ್ಟೇ ಅಲ್ಲ, ಎರಡು ತಿಂಗಳ ಹಿಂದೆ ಲೋಕಾಯುಕ್ತರು ಆಗಮಿಸಿ, ತಿಂಗಳೊಳಗೆ ದಾರಿ ಮಾಡಿಕೊಡುವಂತೆ ಸೂಚಿಸಿದ್ದರು. ಆದರೂ ಈವರೆಗೆ ಯಾವ ಅಧಿಕಾರಿಯೂ ಬಂದಿಲ್ಲ. ಆಕ್ರೋಶ ವ್ಯಕ್ತಪಡಿಸಿದರು.




