ರಾಯಚೂರು: ಗರ್ಭಿಣಿ ಸೊಸೆಯನ್ನೇ ಮಾವ ಕತ್ತು ಸೀಳಿ ಕೊಲೆಗೈದಿರುವ ಹೃದಯವಿದ್ರಾವಕ ಘಟನೆ ರಾಯಚೂರಿನಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕಾಗಿ ಮಾವ, ಗಭಿಣಿ ಸೊಸೆಯನ್ನೇ ಹತ್ಯೆಗೈದಿದ್ದಾನೆ. ರಾಯಚೂರು ಜಿಲ್ಲೆಯ ಸಿರುವಾರ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ನಾಲ್ಕು ತಿಂಗಳ ಗರ್ಭಿಣಿ ರೇಖಾ (25) ಕೊಲೆಯಾದ ದುರ್ದೈವಿ.
ಗರ್ಭಿಣಿಯಾಗಿದ್ದ ರೇಖಾ ತವರು ಮನೆಗೆ ಹೋಗಿದ್ದಳು. ಎರಡು ದಿನಗಳ ಹಿಂದೆ ತವರಿನಿಂದ ಕರೆದುಕೊಂಡು ಬಂದಿದ್ದ ಮಾವ, ಮನೆಯಲ್ಲಿ ಕೆಲಸ ಮಾಡಲು ಯಾರೂ ಇಲ್ಲ ಎಂದು ಕ್ಯಾತೆ ತೆಗೆದಿದ್ದಾನೆ. ಇದೇ ವಿಚಾರವಾಗಿ ಮನೆಯಲ್ಲಿ ಗಲಾಟೆಯಾಗಿತ್ತು.
ಗರ್ಭಿಣಿ ಸೊಸೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ಜೀವ ಉಳಿಸಿಕೊಳ್ಳಲು ಸೊಸೆ ರೇಖಾ ಮನೆಯಿಂದ ಹೊರಗೋಡಿ ಬಂದಿದ್ದಾರೆ. ಆದರೂ ಬಿಡದ ಮಾವ, ಆಕೆಯ ಕತ್ತು ಸೀಲಿ ಕೊಲೆಗೈದಿದ್ದಾನೆ.
ಕವಿತಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.




