ಕರೀಂನಗರ: ತೆಲಂಗಾಣದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ ನಡೆದಿದ್ದು, ಅವಳಿ ಹೆಣ್ಣು ಮಕ್ಕಳನ್ನು ಬಾವಿಗೆ ತಳ್ಳಿ ತಂದೆಯೇ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಹೆಣ್ಣು ಮಕ್ಕಳು ಹುಟ್ಟಿದರೆ ಮಹಾಲಕ್ಷ್ಮಿ ಮನೆಗೆ ಬಂದಳು ಎಂದು ಸಂಭ್ರಮಿಸುವ ಈ ಕಾಲದಲ್ಲಿ, ಕೇವಲ ಹೆಣ್ಣು ಮಕ್ಕಳೆಂಬ ಕಾರಣಕ್ಕೆ ಹೆತ್ತ ತಂದೆಯೇ ತನ್ನಿಬ್ಬರು ಅವಳಿ ಹೆಣ್ಣು ಮಕ್ಕಳನ್ನು ಕ್ರೂರವಾಗಿ ಹತ್ಯೆ ಮಾಡಿದ ಭೀಕರ ಘಟನೆ ತೆಲಂಗಾಣದ ಕರೀಮನಗರ ಜಿಲ್ಲೆಯ ಜೂಬ್ಲಿನಗರದಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ:
ಜೂಬ್ಲಿನಗರದ ನಿವಾಸಿ, ಖಾಸಗಿ ಉದ್ಯೋಗಿಯಾಗಿರುವ ಕಚ್ಚು ಶ್ರೀಶೈಲಂ ಮತ್ತು ಮೌನಿಕಾ ದಂಪತಿಗೆ ನಾಲ್ಕು ವರ್ಷದ ಗೀತಾ ಅನ್ವಿತಾ ಮತ್ತು ಗೀತಾ ಅನಿಷಿ ಎಂಬ ಅವಳಿ ಹೆಣ್ಣು ಮಕ್ಕಳಿದ್ದರು.
ಮಕ್ಕಳು ಹುಟ್ಟಿದಾಗಿನಿಂದಲೂ ಶ್ರೀಶೈಲಂಗೆ ಹೆಣ್ಣು ಮಕ್ಕಳೆಂದರೆ ಅಸಡ್ಡೆ. “ನನಗೆ ಗಂಡು ಮಗು ಬೇಕಿತ್ತು, ನೀನು ಹೆಣ್ಣು ಮಕ್ಕಳನ್ನೇ ಹಡೆದಿದ್ದೀಯಾ” ಎಂದು ಪತ್ನಿಯೊಂದಿಗೆ ನಿರಂತರವಾಗಿ ಜಗಳವಾಡುತ್ತಿದ್ದನು.
ಹಲವು ಬಾರಿ ಕುಟುಂಬಸ್ಥರು ಮತ್ತು ಗ್ರಾಮದ ಹಿರಿಯರು ಬುದ್ಧಿವಾದ ಹೇಳಿದರೂ ಆತನ ಮನಸ್ಸು ಬದಲಾಗಿರಲಿಲ್ಲ. ತನಗೆ ಈ ಪತ್ನಿ ಮತ್ತು ಮಕ್ಕಳು ಬೇಡವೇ ಬೇಡ ಎಂದು ಹಠ ಹಿಡಿಯುತ್ತಿದ್ದನು.
ನಡೆದಿದ್ದೇನು?
ಶುಕ್ರವಾರ ಮನೆಯ ಪಕ್ಕದಲ್ಲೇ ವಾಸವಿದ್ದ ತಮ್ಮ ಮತ್ತು ತಂಗಿ ಜಾತ್ರೆಗೆ ತೆರಳಿದ್ದರು. ಮನೆಯಲ್ಲಿ ಪತ್ನಿ ಮತ್ತು ಮಕ್ಕಳು ಮಾತ್ರ ಇರುವುದನ್ನು ಗಮನಿಸಿದ ಶ್ರೀಶೈಲಂ, ಪತ್ನಿಯೊಂದಿಗೆ ಗಲಾಟೆ ಮಾಡಿ ಇಬ್ಬರು ಮಕ್ಕಳನ್ನು ಬಲವಂತವಾಗಿ ಹೊಲಕ್ಕೆ ಕರೆದುಕೊಂಡು ಹೋಗಿದ್ದಾನೆ.
ಪಾತಕಿ ಶ್ರೀಶೈಲಂ ಹೊಲದಲ್ಲಿ ಮಕ್ಕಳಿಗೆ ಮೊದಲು ವಿಷ ಕುಡಿಸಿದ್ದಾನೆ. ಆನಂತರ ಅರೆಪ್ರಜ್ಞಾವಸ್ಥೆಯಲ್ಲಿದ್ದ ಕಂದಮ್ಮಗಳನ್ನು ಹತ್ತಿರದ ಕೃಷಿ ಬಾವಿಗೆ ಎಸೆದು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಸಿಕ್ಕಿಬಿದ್ದ ಪಾಪಿ ತಂದೆ:
ಮಕ್ಕಳನ್ನು ಕರೆದುಕೊಂಡು ಹೋದ ಶ್ರೀಶೈಲಂ ಒಬ್ಬನೇ ವಾಪಸ್ ಬರುತ್ತಿರುವುದನ್ನು ಕಂಡ ಗ್ರಾಮಸ್ಥರಿಗೆ ಅನುಮಾನ ಬಂದು ಪ್ರಶ್ನಿಸಿದ್ದಾರೆ.
ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಆತ ಮಕ್ಕಳನ್ನು ಬಾವಿಗೆ ತಳ್ಳಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಆತನಿಗೆ ಸರಿಯಾಗಿ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸ್ ಕಾರ್ಯಾಚರಣೆ:
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕರೀಮನಗರ ಗ್ರಾಮಾಂತರ ಪೊಲೀಸರು ಬಾವಿಯಲ್ಲಿ ಶೋಧ ನಡೆಸಿದ್ದಾರೆ. ಮೊದಲು ಒಂದು ಮಗು ಪತ್ತೆಯಾಗಿದ್ದು, ನಂತರ ಕರೀಮನಗರದಿಂದ ರಕ್ಷಣಾ ತಂಡವನ್ನು ಕರೆಸಿ ಬಾವಿಯ ನೀರನ್ನು ಹೊರಹಾಕಿದಾಗ ಮತ್ತೊಂದು ಮಗುವಿನ ಶವ ಪತ್ತೆಯಾಗಿದೆ.
ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕರೀಮನಗರ ಗ್ರಾಮಾಂತರ ಸಿಐ ನಿರಂಜನ್ ರೆಡ್ಡಿ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.




