ಮೊಳಕಾಲ್ಮುರು:ತಾಲೂಕಿನಲ್ಲಿ ಮುಂಗಾರು ಆರಂಭದ ಮೊದಲ ಹಬ್ಬವಾದ ಕಾರ ಹುಣ್ಣಿಮೆಯು ಸಂಭ್ರಮ ಮನೆ ಮಾಡಿದೆ. ಬೇಸಿಗೆ ಕಳೆದು ಮುಂಗಾರು ಹೊಸ್ತಿಲಿಗೆ ಬಂದ ಕನ್ನಡದ ಮೊದಲ ಹಬ್ಬ ಎನಿಸಿಕೊಂಡಿದೆ.
ಬೇಸಿಗೆಯಲ್ಲಿ ಎತ್ತುಗಳಿಂದ ಭೂಮಿಯಲ್ಲಿ ಉಳುಮೆ ಮಾಡುವ ರೈತರು ನಂತರ ಕಾರ ಹುಣ್ಣಿಮೆ ಸಂದರ್ಭದಲ್ಲಿ ಅವುಗಳಿಗೆ ವಿಶ್ರಾಂತಿಯನ್ನು ನೀಡಿ, ನಂತರ ಮುಂಗಾರು ಮಳೆಯಾಗುತ್ತಿದ್ದಂತೆ ಮತ್ತೆ ಕೃಷಿಯಲ್ಲಿನ ಉಳುಮೆಗೆ ಎತ್ತುಗಳಿಗೆ ಗಳೆ ಕಟ್ಟುತ್ತಾರೆ. ಹೀಗಾಗಿ ಕಾರ ಹುಣ್ಣಿಮೆಯು ರೈತನ ಸ್ನೇಹಿತ ಜೋಡೆತ್ತುಗಳಿಗೆ ಪೂಜಿಸುವ ವಿಶೇಷ ಹಬ್ಬವಾಗಿದೆ.
ಕಾರಹುಣ್ಣಿಮೆ ಹಬ್ಬಕ್ಕಾಗಿ ತಾಲೂಕಿನಲ್ಲಿ ಬಹುತೇಕ ಗ್ರಾಮಗಳಲ್ಲಿ ಬೆಳಿಗ್ಗೆಯಿಂದಲೇ ರೈತರು ತಮ್ಮ ಆಕಳು, ಎತ್ತು, ಹೋರಿ, ಕರುಗಳನ್ನು ಮೈತೊಳೆದು ಕೊಂಬು, ಬೆನ್ನು-ಹೊಟ್ಟೆ ಬಾಲಕ್ಕೆ ಬಣ್ಣ ಹಚ್ಚಿ, ಕೊರಳಿಗೆ ಬಗೆ ಬಗೆಯ ಘಂಟೆ ಸರ ಕೊರಳಿಗೆ ದೊಡ್ಡ ಗೆಜ್ಜೆ ಕಟ್ಟಿ, ಕಾಲಿಗೆ ಗೆಜ್ಜೆಗಳ ಸರ ಕಟ್ಟಿ, ಕೊಂಬುಗಳಿಗೆ ಬಣ್ಣ ಬಳಿದು ಬಲೂನ್ ಕಟ್ಟಿಸಿ ಶೃಂಗಾರಗೊಳಿಸಿ ಪೂಜೆ ಸಲ್ಲಿಸಿ ಎತ್ತುಗಳಿಗೆ ಮೊದಲ ನೈವೇದ್ಯ ಅರ್ಪಿಸಿದರು.
ನೈವೇದ್ಯ ಅರ್ಪಿಸಿದ ನಂತರ ಗ್ರಾಮಗಳಲ್ಲಿ ಎತ್ತಿನ ಓಟದಲ್ಲಿ ಸ್ಪರ್ಧೆ ಏರ್ಪಡಿಸಲಾಯಿತು. ಸ್ಪರ್ಧೆಯಲ್ಲಿ ತನ್ನ ಜೋಡೆತ್ತುಗಳು ಗೆಲ್ಲಲಿ ಎಂದು ರೈತರು ಅತ್ಯಂತ ಉತ್ಸಾಹದಿಂದ ಎತ್ತುಗಳ ಜತೆ ಓಡಿ ಸಂಭ್ರಮಿಸಿದರು.ಈ ಓಟವನ್ನು ಅತ್ಯಂತ ರೋಚಕತೆಯಿಂದ ವೀಕ್ಷಿಸಲು ಕೆಲವು ಯುವಕರು, ಮಕ್ಕಳು ಸುತ್ತಮುತ್ತಲಿನ ಗಿಡ-ಮರಗಳು, ಮನೆಗಳ ಮೇಲೇರಿ ರೋಮಾಂಚನ ಮೂಡಿಸುವ ಓಟದ ಸ್ಪರ್ಧೆಯನ್ನು ನೋಡಿ ಕಣ್ತುಂಬಿಕೊಂಡರು.
ಒಟ್ಟಿನಲ್ಲಿ ರೈತರಿಗೆ ಸಂಭ್ರಮಿಸುವ ವಿಶೇಷವ ಹಬ್ಬವಾಗಿರುವುದು ತಾಲೂಕಿನ ಅತ್ಯಂತ ಮನೆ ಮಾಡಿದೆ.
ವರದಿ : ಪಿಎಂ ಗಂಗಾಧರ




