ಚಾಮರಾಜನಗರ: ಹೂತಿಟ್ಟ ಮಹಿಳೆಯ ಶವದ ಮುಂಗೈ ಭೂಮಿಯಿಂದ ಹೊರಬಂದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರದಲ್ಲಿ ನಡೆದಿದೆ. ಮಣ್ಣಿನ ಮಧ್ಯೆ ಶವದ ಕೈ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಚಾಮರಾಜನಗರ ಎಸ್ಪಿ ಡಾ.ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವವನ್ನು ಹೊರ ತೆಗೆದು ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ.
ಇದು ಸುಮಾರು 35 ವರ್ಷದ ಮಹಿಳೆಯ ಶವ ಎಂದು ಅಂದಾಜಿಸಲಾಗಿದ್ದು, ಶವ ಹೂತಿದ್ದ ಅಕ್ಕಪಕ್ಕ ಅರಿಶಿಣ, ಕುಂಕುಮ ಚೆಲ್ಲಿರುವುದು ಪತ್ತೆಯಾಗಿದೆ.
ಹೀಗಾಗಿ ಇದು ಕೊಲೆಯೋ ಅಥವಾ ವಾಮಾಚಾರದ ಪ್ರಯೋಗವೋ ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.