ಪ್ರವಾಹದಲ್ಲಿ ತೇಲಿ ಬಂದ ಮೃತ ಹಸುವಿನ ಅಂತ್ಯಸಂಸ್ಕಾರ :ಪರಿಸರದ ಜನರಿಂದ ಪ್ರಶಂಸೆ. ಯಕ್ಸಂಬಾದಲ್ಲಿ ನಡೆದ ಘಟನೆ
ನಿಪ್ಪಾಣಿ:ದೂಧಗಂಗಾ ನದಿಯ ಪ್ರವಾಹದಲ್ಲಿ ತೇಲಿ ಬಂದ ಮೃತ ಹಸುವನ್ನು ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಿದ ಪ್ರಸಂಗ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ನಡೆದಿದೆ.
ಈ ಕುರಿತು ತಿಳಿದ ಮಾಹಿತಿಯಂತೆ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ದೂಧಗಂಗಾ ನದಿಯ ಪ್ರವಾಹದ ಒಳಹರಿವು ಹೆಚ್ಚಾಗುತ್ತಿದ್ದು ಜಲಾವ್ರತಗೊಂಡ ಪ್ರದೇಶದಿಂದ ಜಲಚರಗಳು, ಪ್ರಾಣಿಗಳು ಹರಿದು ಬರುತ್ತಿವೆ. ಗುರುವಾರ ದೂಧಗಂಗಾ ನದಿಯಿಂದ ಮೃತ ಹಸು ವೊಂದು ತೇಲಿ ಬರುತ್ತಿದ್ದನ್ನು ಕಂಡು ಯಕ್ಸoಬಾ ಪಟ್ಟಣದ ಕರ್ಲಹೊಂಡಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿಯ ಸದಸ್ಯರು ಜೆಸಿಬಿ ಮೂಲಕ ಮೃತ ಹಸುವನ್ನು ತಂದು ಕರ್ಲಹೊಂಡಲಿಂಗೇಶ್ವರ ದೇವಸ್ಥಾನ ಹಿಂಭಾಗದಲ್ಲಿ ಗುಂಡಿಯನ್ನು ಅಗೆದು ಹಿಂದೂ ಸಂಪ್ರದಾಯದಂತೆ ಮೃತ ಹಸುವಿಗೆ ಅಂತ್ಯಕ್ರಿಯೆ ಮಾಡಿದರು.

ಗೋಮಾತೆಯ ಅಂತ್ಯಸಂಸ್ಕಾರ ಪೂಜ್ಯಭಾವನೆಯ ಪ್ರತೀಕವಾಗಿದೆ.ಗೋವುಗಳ ಪವಿತ್ರತೆಯನ್ನು ಅರಿತು ನದಿಯಲ್ಲಿ ತೇಲಿ ಬಂದ ಹಸುವಿನ ಶವವನ್ನು ಅಂತ್ಯಸಂಸ್ಕಾರ ಮಾಡಿರುವ ಕರ್ಲಹೊಂಡಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿ ಸದಸ್ಯರ ಕಾರ್ಯವನ್ನು ಜನವಾಡ, ಶಮನೆವಾಡಿ, ಬೇಡಕಿಹಾಳ, ಭೋಜ ಸೇರಿದಂತೆ ಸುತ್ತಲಿನ ಹಳ್ಳಿಗಳ ಜನತೆ ಪ್ರಶಂಸಿಸುತ್ತಿದೆ.
ವರದಿ:ಮಹಾವೀರ ಚಿಂಚಣೆ




