ಬೆಂಗಳೂರು : ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಿರಾಕರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೇಂದ್ರ ಸರ್ಕಾರ ಮನರೇಗಾ ಯೋಜನೆ ಹೆಸರು ಬದಲಾವಣೆ ಮಾಡಿರುವ ಕುರಿತು ನಾಳೆಯಿಂದ ಜ.31 ರವರೆಗೆ ರಾಜ್ಯ ಸರ್ಕಾರ ವಿಧಾನ ಮಂಡಲ ಜಂಟಿ ವಿಶೇಷ ಅಧಿವೇಶನ ನಡೆಸಲು ಮುಂದಾಗಿತ್ತು.
ಆದರೆ ಇದೀಗ ರಾಜ್ಯಪಾಲರು ಭಾಷಣ ಮಾಡಲು ನಿರಾಕರಿಸಿದ್ದಾರೆ. ನಿನ್ನೆ ತಮಿಳುನಾಡಿನಲ್ಲಿ ರಾಜ್ಯಪಾಲರು ಭಾಷಣ ಮಾಡಲು ನಿರಾಕರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು, ಈ ಬೆನ್ನಲ್ಲೇ ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಿರಾಕರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಗವರ್ನರ್ ಭಾಷಣ ಮಾಡಲು ನಿರಾಕರಿಸಿದ ಹಿನ್ನೆಲೆ ಕಾನೂನು ಸಚಿವರ ನಿಯೋಗ ಇಂದು ಸಂಜೆ 5 :45 ಕ್ಕೆ ರಾಜಭವನಕ್ಕೆ ಭೇಟಿ ನೀಡಲಿದೆ .
ಸಚಿವರ ನೇತೃತ್ವದ ಉನ್ನತ ಮಟ್ಟದ ನಿಯೋಗ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಲಿದೆ. ನಾಳೆಯಿಂದ ಜ.31 ರವರೆಗೆ ವಿಧಾನಮಂಡಲದ ಜಂಟಿ ಅಧಿವೇಶನ ನಡೆಯಲಿದೆ. ರಾಜ್ಯಪಾಲರ ನಡೆ ಬಹಳ ಕುತೂಹಲ ಮೂಡಿಸಿದೆ.
ಒಂದು ವೇಳೆ ಜಂಟಿ ಅಧಿವೇಶನಕ್ಕೆ ರಾಜ್ಯಪಾಲರು ಬರದಿದ್ರೆ ಸಾಂವಿಧಾನಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆಯಿದೆ. ವರ್ಷದ ಮೊದಲ ಅಧಿವೇಶನವನ್ನು ರಾಜ್ಯಪಾಲರ ಭಾಷಣದೊಂದಿಗೆ ಆರಂಭಿಸಬೇಕು ಎಂಬ ನಿಯಮವಿದೆ.
ಆದ್ದರಿಂದ ಒಂದು ವೇಳೆ ಬರದಿದ್ರೆ ದೊಡ್ಡ ಬಿಕ್ಕಟ್ಟು ಎದುರಾಗುವ ಸಾಧ್ಯತೆಯಿದೆ. ಜನವರಿ 22ರಂದು ಬೆಳಿಗ್ಗೆ 11 ಗಂಟೆಗೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಬೇಕಿತ್ತು.
ನಾಳೆಯಿಂದ ಅಧಿವೇಶನ ನಡೆಸಲು ನಿರ್ಧರಿಸಲಾಗಿದ್ದು, ಜ. 24 ಶನಿವಾರ, ಜ. 25 ಭಾನುವಾರ ಮತ್ತು ಜನವರಿ 26ರ ಸೋಮವಾರ ಗಣರಾಜ್ಯೋತ್ಸವ ಸೇರಿ ಮೂರು ದಿನ ಸಾರ್ವತ್ರಿಕ ರಜಾ ದಿನ ಇರಲಿದೆ.
ನಂತರ ಜನವರಿ 27 ರಿಂದ 31ರ ಶನಿವಾರದವರೆಗೆ ಐದು ದಿನ ಸತತವಾಗಿ ಕಲಾಪ ನಡೆಯಲಿದ್ದು, ಒಟ್ಟು 7 ದಿನಗಳ ಕಾಲ ವಿಧಾನ ಮಂಡಲ ಉಭಯ ಸದನಗಳ ಅಧಿವೇಶನ ಫಿಕ್ಸ್ ಆಗಿತ್ತು.




