ಬೆಂಗಳೂರು: ಸರ್ಕಾರದ ಅನುದಾನ ಪಡೆಯುವ ಎಲ್ಲಾ ಸಂಸ್ಥೆಗಳು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತವೆ ಎಂದು ಹೈಕೋರ್ಟ್ ಆದೇಶ ನೀಡಿದೆ. ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಈ ಕುರಿತಾಗಿ ಪ್ರಕರಣವೊಂದರ ವಿಚಾರಣೆಯ ವೇಳೆ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಪುರಸ್ಕರಿಸಿದೆ.
ಮೈಸೂರು ಮೂಲದ ಎಸ್. ಮಲ್ಲಿಕಾರ್ಜುನ ಅವರು ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜಿಗೆ ಸಂಬಂಧಿಸಿದ ವಿವರ ನೀಡುವಂತೆ ಆರ್‌ಟಿಐ ನಡಿ ಸಲ್ಲಿಸಿದ್ದ ಅರ್ಜಿಗೆ ಮಾಹಿತಿ ನೀಡಲು ವಿಫಲವಾದ ಸಂಸ್ಥೆಗೆ ಆಯೋಗ ವಿಧಿಸಿದ್ದ ದಂಡ ಪ್ರಶ್ನಿಸಿ ಮರಿಮಲ್ಲಪ್ಪ ಎಜುಕೇಶನ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠದಿಂದ ಈ ಆದೇಶ ಹೊರಡಿಸಲಾಗಿದೆ.
ಅರ್ಜಿದಾರರ ಟ್ರಸ್ಟ್ ಮಾಹಿತಿ ಒದಗಿಸಲು ವಿಫಲವಾಗಿತ್ತು. ನಂತರ ಮೇಲ್ಮನವಿಗೆ ಸಂಬಂಧಿಸಿದಂತೆ ಆಯೋಗ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದಾಗ ಕನಿಷ್ಠಪಕ್ಷ ಹಾಜರಾಗಬೇಕಿತ್ತು.
ಆದರೆ, ಹಾಜರಾಗದೆ ತಮ್ಮ ಸಂಸ್ಥೆ ಸಾರ್ವಜನಿಕ ಪ್ರಾಧಿಕಾರವಲ್ಲ, ಹೀಗಾಗಿ ಅರ್ಜಿ ವಿಚಾರವಾಗಿ ಯಾವುದೇ ಮಾಹಿತಿ ನೀಡಬೇಕಿಲ್ಲ ಎಂದು ಕಟುವಾಗಿ ಉತ್ತರಿಸಿರುವುದು ಒಪ್ಪುವಂತಹದ್ದಲ್ಲ ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸಾರ್ವಜನಿಕ ಪ್ರಾಧಿಕಾರವಲ್ಲ ಎಂಬುದನ್ನು ಪರಿಗಣಿಸಬೇಕು ಎಂಬ ಅರ್ಜಿದಾರರ ವಾದವನ್ನು ತಳ್ಳಿ ಹಾಕಿದ್ದು, ಆಯೋಗದ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾ ಮಾಡಿದೆ.