ತುರುವೇಕೆರೆ: ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕನ್ನಡ ರಾಜ್ಯೋತ್ಸವದಂದು ಕನ್ನಡ ಧ್ವಜ ನೆಲ ನೋಡುವಂತಾಗಿದೆ.
ನವೆಂಬರ್ 01 ಕನ್ನಡ ರಾಜ್ಯೋತ್ಸವವನ್ನು ಕಡ್ಡಾಯವಾಗಿ ಎಲ್ಲಾ ಸರ್ಕಾರಿ ಕಛೇರಿಗಳು, ಶಾಲಾ ಕಾಲೇಜಿನಲ್ಲಿ ಆಚರಿಸಿ ಧ್ವಜಾರೋಹಣ ನೆರವೇರಿಸಬೇಕೆಂದು ಸರ್ಕಾರ ಆದೇಶಿಸಿದೆ. ಆದರೆ ತುರುವೇಕೆರೆ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸರ್ಕಾರದ ಆದೇಶವನ್ನು ನಿರ್ಲಕ್ಷಿಸಿ ಕಾಟಾಚಾರಕ್ಕೆಂಬಂತೆ ಮರದ ಕೋಲಿಗೆ ಬಾವುಟ ಕಟ್ಟಿ ಕಟ್ಟಡದ ಕಂಬಕ್ಕೆ ತಗುಲು ಹಾಕಿ ಹೋಗಿದ್ದಾರೆ.
ಕನ್ನಡ ನಾಡಲ್ಲಿ ಕನ್ನಡ ಭಾಷೆಯ ಮಡಿಲಲ್ಲಿ, ಕನ್ನಡ ನೆಲದ ಅನ್ನ ತಿನ್ನುತ್ತಾ ಜೀವನ ಸಾಗಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಅನ್ನದ ಋಣಕ್ಕಾದರೂ ಕನ್ನಡ ರಾಜ್ಯೋತ್ಸವವನ್ನು ಗೌರವದಿಂದ ಆಚರಿಸಬೇಕಿತ್ತು, ಕನ್ನಡ ನೆಲ, ಜಲ, ಭಾಷೆ ಹಾಗೂ ಧ್ವಜಕ್ಕೆ ಪ್ರತಿ ಕ್ಷಣ ಗೌರವ ನೀಡಬೇಕು. ಆದರೆ ರಾಜ್ಯೋತ್ಸವದ ದಿನದಂದೇ ಬೇಕಾಬಿಟ್ಟಿ ಬಾವುಟವನ್ನು ಕಂಬಕ್ಕೆ ಕಟ್ಟಿ ಹೋಗಿರುವುದು, ಆ ಬಾವುಟವು ಕೆಲವೇ ಕ್ಷಣದಲ್ಲಿ ನೆಲ ನೋಡುವಂತಾಗಿರುವುದು ಬೇಸರದ ಸಂಗತಿಯಾಗಿದೆ.
ಕನ್ನಡ ಧ್ವಜಕ್ಕೆ ಅವಮಾನವಾಗುವ ರೀತಿ ನಡೆದುಕೊಂಡಿರುವ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು, ನೌಕರರು, ಸಿಬ್ಬಂದಿಯನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಹಾಗೂ ಕಾನೂನು ರೀತಿ ತಾಲೂಕಯ ಆಡಳಿತದ ದಂಡಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಕನ್ನಡ ಪರ ಸಂಘಟನೆಗಳು, ನಾಗರೀಕರು ಆಗ್ರಹಿಸಿದ್ದಾರೆ.
ವರದಿ: ಗಿರೀಶ್ ಕೆ ಭಟ್