ರೋಮ್: ಜೈಲು ಕೈದಿಗಳಿಗೆ ಖಾಸಗಿ ಭೇಟಿ ಮತ್ತು ಏಕಾಂತ ಸಾಂವಿಧಾನಿಕ ಹಕ್ಕು ಎಂಬ ನ್ಯಾಯಾಲಯದ ತೀರ್ಪಿನ ಹಿನ್ನಲೆಯಲ್ಲಿ ಮಹತ್ವದ ಹೆಜ್ಜೆಯನ್ನಟ್ಟಿರುವ ಇಟಲಿ ಸರ್ಕಾರ ಕೈದಿಗಳಿಗಾಗಿ ಜೈಲಿನಲ್ಲೇ ಸೆಕ್ಸ್ ರೂಂ (Sex Room) ತೆರೆದಿದೆ.
ಕೈದಿಗಳ ನೋಡಲು ಬರುವ ಸಂಗಾತಿಗಳು ಅಥವಾ ಹೊರಗಿನಿಂದ ಭೇಟಿ ನೀಡುವ ಪಾಲುದಾರರೊಂದಿಗೆ ಕೈದಿಗಳು “ಆಪ್ತ ಸಭೆಗಳನ್ನು” ನಡೆಸಲು ಇಟಲಿ ಸರ್ಕಾರ ಇದೇ ಮೊದಲ ಬಾರಿಗೆ ಸೆಕ್ಸ್ ರೂಂ ಗಳನ್ನು ತೆರೆದಿದೆ. ಇಟಲಿಯ ಮೊದಲ ಕೈದಿಗಳ ಲೈಂಗಿಕ ಕೊಠಡಿ (Sex Room) ಶುಕ್ರವಾರ ಕಾರ್ಯರೂಪಕ್ಕೆ ಬಂದಿದೆ.
ಮಧ್ಯ ಉಂಬ್ರಿಯಾ ಪ್ರದೇಶದ ಜೈಲಿನಲ್ಲಿರುವ ಈ ಸೆಕ್ಸ್ ರೂಂ ತೆರೆಯಲಾಗಿದ್ದು, ಈ ವಿಶೇಷ ಸೌಲಭ್ಯದಲ್ಲಿ ಕೈದಿಯೊಬ್ಬನಿಗೆ ತನ್ನ ಮಹಿಳಾ ಸಂಗಾತಿಯಿಂದ ಭೇಟಿಗೆ ಅವಕಾಶ ನೀಡಲಾಯಿತು.
ಈ ಬಗ್ಗೆ ಮಾಹಿತಿ ನೀಡಿರುವ ಉಂಬ್ರಿಯಾದ ಕೈದಿಗಳ ಹಕ್ಕುಗಳ ಒಂಬುಡ್ಸ್‌ಮನ್ ಗೈಸೆಪ್ಪೆ ಕ್ಯಾಫೊರಿಯೊ ಅವರು, ‘ಎಲ್ಲವೂ ಸುಗಮವಾಗಿ ನಡೆದ ಕಾರಣ ನಮಗೆ ಸಂತೋಷವಾಗಿದೆ. ಆದರೆ ಈ ಸೆಕ್ಸ್ ರೂಂಗೆ ಬರುವ ವ್ಯಕ್ತಿಗಳ ಖಾಸಗಿ ತನ ರಕ್ಷಿಸಲು ಗರಿಷ್ಠ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಅವಶ್ಯಕ. ಒಂದು ರೀತಿಯ ಪ್ರಯೋಗ ಚೆನ್ನಾಗಿ ನಡೆಯಿತು ಎಂದು ನಾವು ಹೇಳಬಹುದು ಮತ್ತು ಮುಂದಿನ ಕೆಲವು ದಿನಗಳಲ್ಲಿ ಇತರೆ ಸಭೆಗಳು ಇರುತ್ತವೆ ಎಂದು ಹೇಳಿದರು.
ಇನ್ನು ಜೈಲಿನಲ್ಲಿರುವ ಕೈದಿಗಳಿಗೂ ಖಾಸಗಿತನ ಇರಬೇಕು ಎಂದು ಈ ಹಿಂದೆ ಇಟಲಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿತ್ತು. ಜನವರಿ 2024 ರಲ್ಲಿ ಪ್ರಕಟವಾದ ತೀರ್ಪಿನಲ್ಲಿ, ನ್ಯಾಯಾಲಯವು ಕೈದಿಗಳು ಸಂಗಾತಿಗಳು ಅಥವಾ ದೀರ್ಘಾವಧಿಯ ಪಾಲುದಾರರೊಂದಿಗೆ ಖಾಸಗಿ ಮೀಟಿಂಗ್ ಗಳನ್ನು ನಡೆಸುವ ಹಕ್ಕನ್ನು ಹೊಂದಿರಬೇಕು ಮತ್ತು ಅವರ ಮೇಲ್ನಿಚಾರಣೆಗೆ ಅಲ್ಲಿ ಯಾವುದೇ ಜೈಲು ಸಿಬ್ಬಂದಿ ಇರಬಾರದು ಎಂದು ಹೇಳಿತ್ತು.
ಹೆಚ್ಚಿನ ಯುರೋಪಿಯನ್ ದೇಶಗಳಲ್ಲಿ ಜೈಲುಗಳಲ್ಲಿ ಈಗಾಗಲೇ ದಾಂಪತ್ಯ ಭೇಟಿಗಳಿಗೆ ಅವಕಾಶವಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು. ಈ ಪಟ್ಟಿಯಲ್ಲಿ ಫ್ರಾನ್ಸ್, ಜರ್ಮನಿ, ಸ್ಪೇನ್, ನೆದರ್ಲ್ಯಾಂಡ್ಸ್, ಸ್ವೀಡನ್ ಮತ್ತು ಇತರ ದೇಶಗಳು ಸೇರಿವೆ. ನಿಕಟ ಸಭೆಗೆ ಅವಕಾಶ ನೀಡಿದ ಕೈದಿಗಳು ಎರಡು ಗಂಟೆಗಳವರೆಗೆ ಹಾಸಿಗೆ ಮತ್ತು ಶೌಚಾಲಯವನ್ನು ಹೊಂದಿರುವ ಕೋಣೆಗೆ ಪ್ರವೇಶವನ್ನು ಹೊಂದಿರಬೇಕು ಎಂದು ತೀರ್ಪು ನೀಡಿತ್ತು.
ನ್ಯಾಯಾಲಯದ ತೀರ್ಪಿನಂತೆ ಕಳೆದವಾರ ಇಟಲಿ ಸರ್ಕಾರದ ನ್ಯಾಯ ಸಚಿವಾಲಯ ಕಳೆದ ವಾರ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಇದರ ಅನ್ವಯ ಜೈಲಿನಲ್ಲಿ ಏರ್ಪಡಿಸುವ ಸೆಕ್ಸ್ ರೂಂ ಅಥವಾ ಕೋಣೆಯ ಬಾಗಿಲು ಅನ್‌ಲಾಕ್ ಆಗಿರಬೇಕು, ಅಗತ್ಯವಿದ್ದರೆ ಜೈಲು ಸಿಬ್ಬಂದಿಗೆ ಮಧ್ಯಪ್ರವೇಶಿಸುವ ಸಾಧ್ಯತೆಯನ್ನು ನೀಡುತ್ತದೆ.
ಅಂದಹಾಗೆ ಇಟಲಿಯ ಕಾರಾಗೃಹಗಳು ಯುರೋಪಿನಲ್ಲಿ ಅತ್ಯಂತ ಕೆಟ್ಟ ಮತ್ತು ದೊಡ್ಡ ಜನದಟ್ಟಣೆ ಹೊಂದಿವೆ ಮತ್ತು ಇತ್ತೀಚೆಗೆ ಹೆಚ್ಚು ಆತ್ಮಹತ್ಯೆಗಳು ಕೂಡ ಇಲ್ಲಿಂದಲೇ ದಾಖಲಾಗಿದ್ದವು. ಅಧಿಕೃತ ಮಾಹಿತಿಯ ಪ್ರಕಾರ, ದೇಶದಲ್ಲಿ 62,000 ಕ್ಕೂ ಹೆಚ್ಚು ಕೈದಿಗಳಿದ್ದಾರೆ, ಇದು ಜೈಲುಗಳ ಅಧಿಕೃತ ಗರಿಷ್ಠ ಸಾಮರ್ಥ್ಯಕ್ಕಿಂತ 21% ಕ್ಕಿಂತ ಹೆಚ್ಚು ಎಂದು ಹೇಳಲಾಗಿದೆ.