ಗಂಗಾವತಿ: ವಾಯುವಿಹಾರಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ವಿದೇಶಿಯರಿದ್ದ ಗುಂಪಿನ ಮೇಲೆ ದಾಳಿ ಮಾಡಿರುವ ಕೆಲ ಸ್ಥಳೀಯ ಯುವಕರು, ಗುಂಪಿನಲ್ಲಿದ್ದ ಪುರುಷರನ್ನು ಕಾಲುವೆಗೆ ದೂಡಿ, ಒಬ್ಬ ವಿದೇಶಿ ಮತ್ತು ಒಬ್ಬ ಸ್ಥಳೀಯ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ತಾಲ್ಲೂಕಿನ ಸಣಾಪುರ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಪ್ರವಾಸಿತಾಣ ಸಾಣಾಪುರ ಕೆರೆ ಬಳಿ ಜಂಗ್ಲಿಗೆ ಹೋಗುವ ರಸ್ತೆ ಮಧ್ಯದಲ್ಲಿನ ತುಂಗಾಭದ್ರ ಎಡದಂಡೆ ಕಾಲುವೆ ಪಕ್ಕ ಈ ಘಟನೆ ನಡೆದಿದೆ. ಗಿಟಾರ್ ಬಾರಿಸುತ್ತಾ ಕುಳಿತಿದ್ದ ಇಬ್ಬರು ವಿದೇಶಿ ಹಾಗೂ ಮೂವರು ದೇಶಿಯ ಪ್ರವಾಸಿಗರ ಮೇಲೆ ಗುರುವಾರ ತಡರಾತ್ರಿ ಹಲ್ಲೆಯಾಗಿದೆ.
ಈ ಘಟನೆಯಲ್ಲಿ ಕಾಲುವೆಗೆ ಬಿದ್ದಿದ್ದ ಒಬ್ಬ ಸ್ವದೇಶಿ ಯುವಕ ನಾಪತ್ತೆಯಾಗಿದ್ದು, ಇನ್ನುಳಿದವರಿಗೆ ಗಾಯಗಳಾಗಿವೆ. ಅಮೆರಿಕ ಮೂಲದ ಡೇನಿಯಲ್, ಇಸ್ರೇಲ್ನ ಸೀಮಾ, ಗಂಗಾವತಿ ತಾಲ್ಲೂಕಿನ ಆನೆಗೊಂದಿಯ ಹಾರ್ಟ್ ಲೈನ್ ಹೋಂ ಸ್ಟೇ ಒಂದರ ಮಾಲಕಿ ಅಂಬಿಕಾ ನಾಯ್ಕ್, ಮಹಾರಾಷ್ಟ್ರದ ನಾಸಿಕ್ನ ಪಂಕಜ್ ಪಟೇಲ್ ಹಾಗೂ ಒಡಿಶಾದ ಬಿ.ಬಾಸ್ ಹಲ್ಲೆಗೆ ಒಳಗಾದವರು ಎಂದು ಪೊಲೀಸರು ತಿಳಿಸಿದ್ದಾರೆ.
ಇದರಲ್ಲಿ ನಾಲ್ಕು ಜನರು ಗಂಗಾವತಿ ಉಪವಿಭಾಗ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಒಡಿಶಾದ ಪ್ರವಾಸಿಗ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಘಟನೆಯ ಹಿನ್ನೆಲೆ: ಗುರುವಾರ ರಾತ್ರಿ ಸಣಾಪುರ ಕೆರೆ ಸಮೀಪದ ಕಾಲುವೆ ಪಕ್ಕದಲ್ಲಿ ನಕ್ಷತ್ರಗಳನ್ನು ನೋಡಲು ಹಾರ್ಟ್ ಲೈನ್ ಹೋಂ ಸ್ಟೇನ ಅಂಬಿಕಾ ಎಂಬವರೊಂದಿಗೆ ಈ ಪ್ರವಾಸಿಗರು ತಡರಾತ್ರಿಯಲ್ಲಿ ಹೋಗಿದ್ದಾರೆ. ಅಲ್ಲಿಯೇ ತಂಗಿದ್ದ ಈ ಐವರು ಗಿಟಾರ್ ಬಾರಿಸುತ್ತಾ ಪ್ರಕೃತಿಯ ಸೌಂದರ್ಯ ಆಸ್ವಾದಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಮೂವರು ಆಗಂತುಕರು ಇವರ ಬಳಿ ಬಂದು ಪೆಟ್ರೋಲ್ಗೆ ಹಣ ಕೇಳಿದ್ದಾರೆ. ಆಗ ಎರಡೂ ಗುಂಪಿನ ನಡುವೆ ವಾಗ್ವಾದ ನಡೆದು ಪರಸ್ಪರ ಕೈ ಮಿಲಾಯಿಸಿದ್ದಾರೆ.
ಮೂವರು ಅನಾಮಿಕರು ಅಮೆರಿಕ ಮೂಲದ ಡೇನಿಯಲ್, ನಾಸಿಕ್ ಮೂಲದ ಪಂಕಜ್, ಒಡಿಶಾ ಮೂಲದ ಬಿ.ಬಾಸ್ ಎಂಬವರನ್ನು ಪಕ್ಕದ ಕಾಲುವೆಗೆ ತಳ್ಳಿದ್ದಾರೆ. ನಂತರ ಮಹಿಳೆಯರ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಕಾಲುವೆಗೆ ಬಿದ್ದ ಮೂವರಲ್ಲಿ ಡೇನಿಯಲ್, ಪಂಕಜ್ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಬಿ.ಬಾಸ್ ಮಾತ್ರ ನಾಪತ್ತೆಯಾಗಿದ್ದು ಆತನ ಹುಡುಕಾಟ ನಡೆದಿದೆ.
ಮೂವರು ಅನಾಮಿಕರಿಂದ ತಪ್ಪಿಸಿಕೊಂಡು ಹಾರ್ಟ್ ಲೈನ್ ಹೋಂಸ್ಟೇಗೆ ಬಂದ ಮಹಿಳೆಯರು ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬಯಲಿಗೆ ಬಂದಿದೆ. ಘಟನಾ ಸ್ಥಳಕ್ಕೆ ತಡರಾತ್ರಿ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ಗಂಗಾವತಿ ಗ್ರಾಮೀಣ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಸೋಮಶೇಖರ್ ಜುಟ್ಟಾಲ್ ಭೇಟಿ ನೀಡಿ ಪರಿಶೀಲಿಸಿದರು.
“ಶುಕ್ರವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಶ್ವಾನದಳ ಸಿಬ್ಬಂದಿ, ಬೆರಳಚ್ಚು ತಜ್ಞರು ಬಂದಿದ್ದು ತಪಾಸಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ದ್ವಿಚಕ್ರ ವಾಹನ, ಹ್ಯಾಂಡ್ ಬ್ಯಾಗ್ ಲಭಿಸಿವೆ. ಹ್ಯಾಂಡ್ ಬ್ಯಾಗ್ನಲ್ಲಿ ಕ್ಯಾಮೆರಾ, ಪವರ್ ಬ್ಯಾಂಕ್, ಪೆನ್ನು, ಮುರಿದು ಬಿದ್ದ ಗಿಟಾರ್, ಕೈವಸ್ತ್ರ, ಸಿಗರೇಟ್, ರಕ್ತದ ಕಲೆ ಇರುವ ಬಟ್ಟೆ ಲಭ್ಯವಾಗಿವೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.



