Ad imageAd image

ಪ್ರಾರ್ಥನಾ ಕಾಲೇಜಿನ ಆಡಳಿತದಿಂದ ಕನ್ನಡಕ್ಕೆ ಘೋರ ಅವಮಾನ: ಸರ್ಕಾರಿ ಆದೇಶವಿದ್ದರೂ ಮೆರೆಯುತ್ತಿದೆ ಇಂಗ್ಲಿಷ್ ಬೋರ್ಡ್ : ಕರವೇ ಆಕ್ರೋಶ

Bharath Vaibhav
ಪ್ರಾರ್ಥನಾ ಕಾಲೇಜಿನ ಆಡಳಿತದಿಂದ ಕನ್ನಡಕ್ಕೆ ಘೋರ ಅವಮಾನ: ಸರ್ಕಾರಿ ಆದೇಶವಿದ್ದರೂ ಮೆರೆಯುತ್ತಿದೆ ಇಂಗ್ಲಿಷ್ ಬೋರ್ಡ್ : ಕರವೇ ಆಕ್ರೋಶ
WhatsApp Group Join Now
Telegram Group Join Now

ಅಥಣಿ: ಕರ್ನಾಟಕ ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಸಹ, ಸ್ಥಳೀಯ ಪುರಸಭೆ ಅಧಿಕಾರಿಗಳು ಅದನ್ನು ಕಿಂಚಿತ್ತೂ ಪಾಲಿಸದೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಉದ್ದಿಮೆ ಮಳಿಗೆಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕೆಂಬ ನಿಯಮವನ್ನು ಗಾಳಿಗೆ ತೂರಿ, ಕೇವಲ ಇಂಗ್ಲಿಷ್ ನಾಮಫಲಕಗಳಿಗೆ (ಬೋರ್ಡ್) ಮೌನ ಸಮ್ಮತಿ ನೀಡುತ್ತಿರುವುದು ಕನ್ನಡ ನಾಡು-ನುಡಿಗೆ ಮಾಡುತ್ತಿರುವ ಘೋರ ಅವಮಾನವಾಗಿದೆ. ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ 60% ರಷ್ಟು ಕನ್ನಡ ಇರಲೇಬೇಕೆಂದು ಕಡ್ಡಾಯಗೊಳಿಸಿದೆ. ಆದರೆ, ಪುರಸಭೆಯ ಕೆಲವು ಅಧಿಕಾರಿಗಳು ಈ ಕಾನೂನನ್ನು ಜಾರಿಗೊಳಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇಂಗ್ಲಿಷ್ ಭಾಷೆಯ ನಾಮಫಲಕಗಳಿಗೆ ರಾಜಾರೋಷವಾಗಿ ಅನುಮತಿ ನೀಡುತ್ತಿರುವ ಅಧಿಕಾರಿಗಳ ನಡೆ, ಅವರು ಕನ್ನಡಿಗರ ಹಿತಾಸಕ್ತಿಗಿಂತ ಪರಭಾಷಾ ವ್ಯಾಮೋಹಕ್ಕೆ ಮಣಿಯುತ್ತಿದ್ದಾರೆಯೇ ಎಂಬ ಸಂಶಯವನ್ನು ಹುಟ್ಟುಹಾಕಿದೆ.

ಇದು ಕೇವಲ ಆಡಳಿತಾತ್ಮಕ ವೈಫಲ್ಯವಲ್ಲ, ಕನ್ನಡ ಅಸ್ಮಿತೆಯ ಮೇಲಿನ ದಾಳಿ. ಒಂದು ವೇಳೆ ಅಧಿಕಾರಿಗಳು ತಮ್ಮ ಧೋರಣೆಯನ್ನು ತಿದ್ದಿಕೊಳ್ಳದಿದ್ದರೆ ಮತ್ತು ಕೂಡಲೇ ಎಲ್ಲಾ ಅನಧಿಕೃತ ಇಂಗ್ಲಿಷ್ ನಾಮಫಲಕಗಳನ್ನು ತೆರವುಗೊಳಿಸಿ ಕನ್ನಡಕ್ಕೆ ಮೊದಲ ಆದ್ಯತೆ ನೀಡದಿದ್ದರೆ, ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಕಾರ್ಯಕರ್ತರು ಸುಮ್ಮನೆ ಕೂರುವುದಿಲ್ಲ. ಮುಂಬರುವ ದಿನಗಳಲ್ಲಿ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ, ಬೀದಿಗಿಳಿದು ಅತ್ಯಂತ ಉಗ್ರವಾದ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ( ಕರವೇ) ತಾಲೂಕಾ ಅಧ್ಯಕ್ಷರಾದ ಶಬ್ಬೀರ ಸಾತ್ಬಚ್ಚೆ ಹಾಗೂ ಇತರ ಕಾರ್ಯಕರ್ತರಾದ ಪ್ರಶಾಂತ್ ಮುರುಗುಂಡಿ, ಜಾಫರ್ ಪಾಟೀಲ್, ಇನ್ನೂ ಅನೇಕರು ಉಪಸ್ತಿತರಿದ್ದು ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕ ಸಚಿವ ಸಂಪುಟವು ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಕಾಯ್ದೆ-೨೦೨೪’ ರ ಅಡಿಯಲ್ಲಿ ಶೇ. ೬೦ ರಷ್ಟು ಕನ್ನಡವನ್ನು ಕಡ್ಡಾಯಗೊಳಿಸಿದೆ. ಇದನ್ನು ಪಾಲಿಸದಿದ್ದರೆ ದಂಡ ಮತ್ತು ಪರವಾನಗಿ ರದ್ದತಿಯಂತಹ ಕಠಿಣ ಕ್ರಮಗಳಿಗೆ ಅವಕಾಶವಿದೆ. ಪುರಸಭೆಯ ಮುಖ್ಯಾಧಿಕಾರಿಗಳು ಆಯಾ ವ್ಯಾಪ್ತಿಯಲ್ಲಿ ಈ ನಿಯಮ ಜಾರಿಯಾಗುತ್ತಿದೆಯೇ ಎಂದು ಪರಿಶೀಲಿಸಬೇಕು.

ಅವರು ಇದನ್ನು ನಿರ್ಲಕ್ಷಿಸಿದರೆ ಅದು ‘ಕರ್ತವ್ಯ ಲೋಪ’ ಎಂದು ಪರಿಗಣಿತವಾಗುತ್ತದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ವ್ಯಾಪಾರ-ವಹಿವಾಟು ನಡೆಸುವವರು ಸ್ಥಳೀಯ ಭಾಷೆಯನ್ನು ಗೌರವಿಸುವುದು ಕನಿಷ್ಠ ಜವಾಬ್ದಾರಿಯಾಗಿದೆ. ಅಧಿಕಾರಿಗಳು ಇದಕ್ಕೆ ಬೆಂಬಲ ನೀಡದಿರುವುದು ಕನ್ನಡಿಗರ ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ ಎಂದು ಹೇಳಿದ್ದಾರೆ.

ವರದಿ:ಪ್ರಲ್ಹಾದ ವಾಘಮೋರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!