ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿಮೆ ಮೇಲೆ ಬೂಟುಗಳನ್ನಿಟ್ಟ ಆರೋಪದ ಮೇಲೆ 35 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯು ಭೋಪಾಲ್‌ನ ಕುಶಾಭೌ ಠಾಕ್ರೆ ಆಡಿಟೋರಿಯಂ ಸ್ಕ್ವೇರ್‌ನಲ್ಲಿರುವ ಪ್ರತಿಮೆ ಎರಡೂ ಭುಜಗಳ ಮೇಲೆ ಶೂಗಳನ್ನು ಹಾಕಿದ್ದಾನೆ.
ಈ ಘಟನೆಯು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ನಂತರ ಪ್ರತಿಮೆಯನ್ನು ಹಾಲು, ನೀರಿನಿಂದ ಸ್ವಚ್ಛಗೊಳಿಸಿದ್ದಾರೆ. ಈ ಬಗ್ಗೆ ಔಪಚಾರಿಕ ದೂರನ್ನೂ ದಾಖಲಿಸಿದ್ದಾರೆ.
ಅರೇರಾ ಹಿಲ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮನೋಜ್ ಪಟ್ವಾ ಮಾತನಾಡಿ, ಜಹಾಂಗೀರಾಬಾದ್ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಯಶವಂತ್ ಯಾದವ್ ಅವರ ದೂರಿನ ಮೇರೆಗೆ ನಾವು ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. 35 ವರ್ಷದ ವ್ಯಕ್ತಿ ಈ ಕೃತ್ಯ ಎಸಗಿದಾಗ ಕುಡಿದ ಅಮಲಿನಲ್ಲಿದ್ದ ಎಂದು ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿಮೆಗೆ ಬೂಟುಗಳನ್ನು ಹಾಕಲಾಗಿದೆ ಎಂಬ ಸುದ್ದಿ ಬೆಳಕಿಗೆ ಬಂದ ತಕ್ಷಣ, ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದು, ಆರೋಪಿ ವಿರುದ್ಧ ಕ್ರಮ ಕ್ರಮಕ್ಕೆ ಒತ್ತಾಯಿಸಿದ್ದಾರೆ.