ಹೈದರಾಬಾದ್: ಅಪ್ರಾಪ್ತ ಪ್ರಿಯಕರನ ಸಲಹೆ ಮೇರೆಗೆ 17 ವರ್ಷದ ಬಾಲಕಿಯೊಬ್ಬಳು ತನ್ನ ಹೊಟ್ಟೆಯಲ್ಲಿ ಹುಟ್ಟುತ್ತಲೇ ಅಸುನೀಗಿದ್ದ ನವಜಾತ ಶಿಶುವಿನ ಮೃತದೇಹವನ್ನು ಸುಟ್ಟುಹಾಕಿದ ಅಮಾನವೀಯ ಘಟನೆ ಹೈದರಾಬಾದ್ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣ ಭೇದಿಸಿದ ದೋಮಲಗುಡ ಪೊಲೀಸರು, ಇಂತಹದ್ದೊಂದು ಸಲಹೆ ನೀಡಿದ್ದ ಹಾಗೂ ಆಕೆಯನ್ನು ಗರ್ಭಿಣಿಯನ್ನಾಗಿ ಮಾಡಿದ್ದ 17 ವರ್ಷದ ಅಪ್ರಾಪ್ತ ಪ್ರಿಯಕರನನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಿ ಆತನನ್ನು ಬಾಲಾಪರಾಧಿ ಕೇಂದ್ರಕ್ಕೆ ಕಳಿಸಿಕೊಟ್ಟಿದ್ದಾರೆ.
ಪ್ರಕರಣದ ಹಿನ್ನೆಲೆ: ಇತ್ತೀಚೆಗೆ ಮುಶೀರಾಬಾದ್‌ನ ಎನ್‌ಟಿಆರ್ ಕ್ರೀಡಾಂಗಣದ ಬಳಿಯ ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಸುಟ್ಟ ಅವಶೇಷ ಪತ್ತೆಯಾಗಿತ್ತು. ಸ್ಥಳೀಯರು ನೀಡಿದ್ದ ಮಾಹಿತಿ ಮೇರೆಗೆ ಅಲ್ಲಿಗೆ ಬಂದಿದ್ದ ದೋಮಲಗುಡ ಪೊಲೀಸರು, ಎಲ್ಲಾ ರೀತಿಯ ಪರಿಶೀಲನೆ ನಡೆಸಿದ್ದರು. ಸುತ್ತಮುತ್ತಲಿನ ಸಿಸಿಟಿವಿಯನ್ನು ಪರಿಶೀಲಿಸಿದಾಗ ಆರೋಪಿಯ ಗುರುತು ಪತ್ತೆಯಾಗಿತ್ತು. ಅನುಮಾನದಡಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯ ವಿವರಣೆ: ”ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಬಾಲಕಿಯೊಬ್ಬಳು ಈ ಅಮಾನವೀಯ ಕೃತ್ಯವನ್ನು ಮಾಡಿದ್ದು, ಇಂತಹದ್ದೊಂದು ಸಲಹೆ ನೀಡಿದ್ದ ಹಾಗೂ ಆಕೆಯನ್ನು ಗರ್ಭಿಣಿಯನ್ನಾಗಿ ಮಾಡಿದ್ದ ಆರೋಪಿ ಬಾಲಕನನ್ನು ಇದೀಗ ವಶಕ್ಕೆ ಪಡೆಯಲಾಗಿದೆ” ಎಂದು ದೋಮಲಗುಡ ಇನ್ಸ್‌ಪೆಕ್ಟರ್ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ.
”ಬಾಲಕಿಯ ತಂದೆ ಮದ್ಯವ್ಯಸನಿಯಾಗಿದ್ದು, ಎಂಟು ತಿಂಗಳ ಹಿಂದೆಯಷ್ಟೇ ಬಾಲಕಿಯು ತನ್ನ ಸಹೋದರಿಯಿದ್ದಲ್ಲಿಗೆ ಬಂದಿದ್ದಳು. ಇತ್ತೀಚೆಗೆ ನಡೆದ ಸಹೋದರಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿ ಕೂಡ ಆಗಿದ್ದಳು. ಈ ಪಾರ್ಟಿಗೆ ಬಂದಿದ್ದ ಅಡುಗೆ ಮಾಡುವ ಹುಡುಗನ ಪರಿಚಯವಾಗಿದ್ದು, ಪರಿಚಯ ಪ್ರೇಮವಾಗಿ ಬೆಳೆದಿತ್ತು. ದೈಹಿಕ ಸಂಪರ್ಕಕ್ಕೂ ಬಂದಿದ್ದರಿಂದ ಬಾಲಕಿ ಗರ್ಭಿಣಿ ಕೂಡ ಆಗಿದ್ದಳು. ಈ ವಿಚಾರ ತಿಳಿದು ಇಬ್ಬರಲ್ಲೂ ಭಯ ಶುರುವಾಗಿತ್ತು. ಮಾರ್ಚ್ 15 ರಂದು ಆಕೆಯ ಪ್ರಿಯಕರ ನೀಡಿದ್ದ ಗರ್ಭಪಾತ ಮಾತ್ರೆ ಸೇವಿಸಿದ್ದರಿಂದ ಬಾಲಕಿಯು ಮರುದಿನ (ಮಾ.16) ಹೊಟ್ಟೆಯಲ್ಲಿಯೇ ಮೃತಪಟ್ಟ ಮಗುವಿಗೆ ಜನ್ಮ ನೀಡಿದ್ದಳು. ಬಾಲಕಿ ಈ ವಿಚಾರ ತಿಳಿಸಿದಾಗ ಯಾರಿಗೂ ಗೊತ್ತಾಗದಂತೆ ನವಜಾತ ಶಿಶುವಿನ ಮೃತದೇಹವನ್ನು ಸುಟ್ಟುಹಾಕುವಂತೆ ಆಕೆಯ ಪ್ರಿಯಕರ ಸಲಹೆ ನೀಡಿದ್ದ. ಅದರಂತೆ ಬಾಲಕಿ ನವಜಾತ ಶಿಶುವಿನ ಮೃತದೇಹವನ್ನು ಎನ್‌ಟಿಆರ್ ಕ್ರೀಡಾಂಗಣದ ಬಳಿಯ ಕಸದ ತೊಟ್ಟಿಯಲ್ಲಿ ಸುಟ್ಟುಹಾಕಿದ್ದಳು. ಎರಡು ದಿನಗಳ ನಂತರ (ಮಾ.18) ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಸಂಬಂಧಿಕರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ಆಕೆ ಮಗುವಿಗೆ ಜನ್ಮ ನೀಡಿರುವ ವಿಚಾರ ಗೊತ್ತಾಗಿದೆ. ವಿಷಯ ತಿಳಿದು ಆಸ್ಪತ್ರೆಗೆ ಬಂದು ವಿಚಾರಿಸಿದಾಗ ಹಾಗೂ ದೊರೆತ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ನವಜಾತ ಶಿಶುವಿನ ಮೃತದೇಹವನ್ನು ಸುಟ್ಟು ಹಾಕಿದ ಬಾಲಕಿ ಈಕೆಯೇ ಎಂದು ಪೊಲೀಸರಿಗೆ ಗೊತ್ತಾಗಿದೆ. ಪ್ರಕರಣದ ಕುರಿತು ಮತ್ತಷ್ಟು ವಿಚಾರಿಸಿದಾಗ ಬಾಲಕಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಆಕೆಯನ್ನು ಗರ್ಭಿಣಿಯನ್ನಾಗಿ ಮಾಡಿದ್ದ ಅಪ್ರಾಪ್ತ ಬಾಲಕನ ವಿರುದ್ಧ ಪೋಕ್ಸೊ ಪ್ರಕರಣವನ್ನು ದಾಖಲಿಸಿ ಇದೀಗ ಬಾಲಾಪರಾಧಿ ಕೇಂದ್ರ ಕಳಿಸಿಕೊಡಲಾಗಿದೆ” ಎಂದು ಇನ್ಸ್‌ಪೆಕ್ಟರ್ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ.