ಬೆಂಗಳೂರು : ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಸುಗಳ ಮಾಲೀಕ ಕರ್ಣ ಅವರ ಮನೆಗೆ ಸಂಸದ ಪಿ.ಸಿ.ಮೋಹನ್ ಭೇಟಿ ನೀಡಿದ್ದು, ಪೂಜೆ ಸಲ್ಲಿಸುವ ಮೂಲಕ ಎರಡು ಹಸು ಮತ್ತು ಒಂದು ಕರುವನ್ನು ಕೊಡುಗೆಯಾಗಿ ನೀಡಿದ್ದಾರೆ.
ವಾದ್ಯ ಮೇಳ ಮೂಲಕ ಮಹಾಲಕ್ಷ್ಮಿಯನ್ನು ಕರೆತಂದಂತೆ ದನವನ್ನು ಕರ್ಣ ಅವರ ಮನೆಗೆ ಕರೆ ತಂದಿದ್ದು, ಇದಕ್ಕೂ ಮುನ್ನ ಚಾಮರಾಜಪೇಟೆಯ ಮಾರಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಪ್ರಸಾದವನ್ನು ಹಸುಗಳಿಗೆ ನೀಡಿ ಬಳಿಕ ಎರಡು ದನ ಹಾಗೂ ಒಂದು ಕರುವನ್ನು ಮಾಲೀಕ ಕರ್ಣ ಗೆ ಕೊಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೇರೆದಿರುವುದು ಬಹಳ ಬೇಸರ ತಂದಿದೆ, ಮೂಕ ಪ್ರಾಣಿ ಎಂದು ನೋಡದೆ ಇಂತಹ ಅಮಾನವೀಯವಾಗಿ ವರ್ತಿಸುವುದು ನಿಜಕ್ಕೂ ಖಂಡನೀಯ ಗೋವು ಎನ್ನುವುದು ಸನಾತನ ಧರ್ಮೀಯರಿಗೆ ಮಾತೃ ಸ್ವರೂಪಿಣಿಯಾಗಿದ್ದು, ಗೋವಿನಲ್ಲಿ ಮೂರು ಕೋಟಿ ದೇವರನ್ನು ಕಂಡು ಆರಾಧನೆ ಮಾಡುತ್ತೇವೆ ಎಂದರು.
ಅಲ್ಲದೇ, ಕಾಮಧೇನು ಬರೀ ಹಿಂದೂಗಳಿಗೆ ಮಾತ್ರ ಹಾಲು ಕೊಡುವುದಿಲ್ಲ. ಜಾತಿ, ಮತ, ಧರ್ಮ ಭೇದವಿಲ್ಲದೇ ಹಾಲು ನೀಡುವ ಗೋಮಾತೆಯ ಕೆಚ್ಚಲು ಕತ್ತರಿಸುತ್ತಾರೆಂದರೆ ಎಂಥ ವಿಕೃತ ಮನಸ್ಥಿತಿ ಇರಬಹುದು, ಈ ಹಿಂದೆ ಯಾರೆಲ್ಲಾ ಇದ್ದಾರೆ ಅವರೆಲ್ಲರಿಗೂ ಶಿಕ್ಷೆಯಾಗಲೇಬೇಕು ಎಂದು ಪಿಸಿ ಮೋಹನ್ ಆಗ್ರಹಿಸಿದರು.
ಜೊತೆಗೆ ಹಸುವಿನ ಮಾಲೀಕ ಕರ್ಣ ಅವರ ಮನೆಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಇಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಇನ್ನಿತರ ನಾಯಕರೆಲ್ಲ ಸೇರಿ ಗೋಪೂಜೆ ನೆರವೇರಿಸಲಾಗುವುದು ಎಂದು ಮೋಹನ್ ತಿಳಿಸಿದರು.