ಶಿವಮೊಗ್ಗ: ಕ್ರಿಕೆಟ್ ಆಡುವ ವಿಚಾರವಾಗಿ ಕಿರಿಕ್ ನಡೆದು ಯುವಕನೋರ್ವನ ಕೊಲೆ ಮಾಡಲಾಗಿದ್ದು, ಮತ್ತೋರ್ವನಿಗೆ ಗಾಯಗಳಾದ ಘಟನೆ ಜಿಲ್ಲೆಯ ಭದ್ರಾವತಿಯ ಹೊಸಮನೆ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಕೇಶವಪುರ ಬಡಾವಣೆಯ ಅರುಣ್ (23) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಘಟನೆಯಲ್ಲಿ, ಸಂಜಯ್(20) ಎಂಬಾತ ಗಾಯಗೊಂಡಿದ್ದಾನೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಸಂಜೆ ಕ್ರಿಕೆಟ್ ವಿಚಾರವಾಗಿ ಅರುಣ್ ಹಾಗೂ ಇತರರ ನಡುವೆ ಗಲಾಟೆ ನಡೆದಿದೆ. ರಾತ್ರಿ ಕೇಶವಪುರ ಬಡಾವಣೆಯ ನೀರಿನ ಟ್ಯಾಂಕ್ ಕೆಳಗೆ ಕುಳಿತು ಮದ್ಯ ಸೇವಿಸುತ್ತಿರುವಾಗ ಮತ್ತೆ ಯುವಕರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿದೆ. ಈ ವೇಳೆ, ಅರುಣ್ ಎಂಬಾತನಿಗೆ ಲಾಂಗ್ಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ, ಹೊಸಮನೆ ಬಡಾವಣೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




