ಸೇಡಂ : ತಾಲೂಕಿನ ಬಹುತೇಕ ಎಲ್ಲಾ ಕಡೆ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಇದು ರೈತರ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇನ್ನು ಸಮೃದ್ಧವಾಗಿ ಬೆಳೆದ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಲ್ಲಿ ಒಂದಾದ ಹೆಸರು ಕಟಾವಿನ ಹಂತದಲ್ಲಿ ಮಳೆಗಾಹುತಿಯಾಗುತ್ತಿದೆ. ಕೊಯ್ಲಿಗೆ ಬಂದ ಫಸಲು ಬಿಡಿಸಲಾಗದೇ ಜಮೀನಿನಲ್ಲೇ ಕೊಳೆಯುವ ಸ್ಥಿತಿ ಇದೆ. ಹೆಸರು ಮಾತ್ರವಲ್ಲದೆ,ತೊಗರಿ, ಉದ್ದು ಸೇರಿದಂತೆ ಇನ್ನಿತರ ಬೆಳೆಗಳು ಹಾಳಾಗುತ್ತಿವೆ.

ಯಾನಗುಂದಿ, ಮೆದಕ್, ರಿಬ್ಬನ್ ಪಲ್ಲಿ, ಮುಧೋಳ್, ಪಾಖಲ್, ಶೀಲಾರಕೊಟ್, ಬೇನಕನಹಳ್ಳಿ, ಕೊಡ್ಲಾ, ಕೋಲುಕುಂದ,ರಸ್ತೆಗಳ ಮಾರ್ಗದುದ್ದಕ್ಕೂ ರೈತರು ತಾವು ಬೆಳೆದ ಹೆಸರು ಕಾಯಿ ಸಮೇತ ಬಂಡಿ,ಟ್ರ್ಯಾಕ್ಟರ್ ಗಳ ಮೂಲಕ ರಸ್ತೆಗೆ ತಂದು ರಸ್ತೆ ಮೇಲೆ ಹಾಕಿ ಕಾಯುವ ಕೆಲಸ ಮಾಡುತ್ತಿದ್ದಾರೆ. ಆಗಾಗ ಬರುತ್ತಿರುವ ಬಿಸಿಲಿಗೆ ಒಂಚೂರು ಒಣಗಬಹುದು,ಇಲ್ಲವಾದರೆ ಗಾಲಿಯಾಡಬಹುದು ಎನ್ನುವ ಆಶಾಭಾವನೆ ರೈತರದ್ದಾಗಿದೆ. ಕಾಯಿ ಮಳೆಯಿಂದ ಹಸಿಯಾಗಿದ್ದರೂ ಕೆಲವರು ದೇವರ ಮೇಲೆ ಭಾರ ಹಾಕಿ ರಸ್ತೆ ಮೇಲೆ ರಾಶಿ ಮಾಡುವ ಯಂತ್ರದಿಂದ ಹೆಸರು ರಾಶಿ ಮಾಡುತ್ತಿದ್ದಾರೆ.

ಎಡೆಬಿಡದೇ ಸುರಿತ್ತುರುವ ಮಳೆ ಅನ್ನದಾತರ ಪಾಲಿಗೆ ಶಾಪವಾಗಿ ಕಾಡುತ್ತಿದ್ದಾನೆ, ಇತ್ತ ಕೈಗೆ ಬಂದ ಬೆಳೆ ಬಾಯಿಗೆ ಬಾರದಂತಾಗಿದೆ. ಇದು ರೈತರ ವೈಯಕ್ತಿಕ ಗಂಭೀರತೆ ಮತ್ತು ತೀವ್ರ ನೋವನ್ನು ತೋರಿಸುತ್ತದೆ ಅವರು ತಮ್ಮ ಜೀವಿತವನ್ನೇ ಹೂಡಿರುವ ಮಣ್ಣಿಗೆ ನ್ಯಾಯ ಸಿಗಲಿ ಎಂಬ ಮನೋಭಾವ.
ಈ ದೇಶದಲ್ಲಿ ಅನ್ನ ನೀಡುತ್ತಿರುವ ರೈತನು ಇಂದು ತನ್ನ ಹಕ್ಕಿಗಾಗಿ ರಸ್ತೆಗೆ ಇಳಿಯಬೇಕಾಗುತ್ತದೆ ಎಂಬುದು ಬಹುಮಾನ್ಯವಾದ ದುರಂತ. ಇತ್ತೀಚಿನ ಮಳೆಯ ಪರಿಣಾಮವಾಗಿ ಸಾವಿರಾರು ಎಕರೆಗಳಲ್ಲಿ ಬೆಳೆ ನಾಶವಾಗಿದೆ. ನಾವು ಸರ್ಕಾರವನ್ನು ಇದು ಪ್ರಕೃತಿದುರಂತ ಎಂದು ಪರಿಗಣಿಸಿ ತಕ್ಷಣ ನಷ್ಟಮಾಪನ ಕಾರ್ಯ ಆರಂಭಿಸಿ, ಪೂರಕ ಪರಿಹಾರ ನೀಡಬೇಕು ಎಂದು ಒತ್ತಾಯಿಸುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಅಧ್ಯಕ್ಷರಾದ ಅನಿಲ್ ಪೋಟೆಲಿ ಇಟ್ಕಲ್ ಅವರು ವ್ಯಕ್ತಪಡಿಸಿದರು.
ಪರಿಹಾರ ನೀಡುವಲ್ಲಿ ತಡವಾಯಿತು ಅಂದರೆ ರೈತರ ಬಾಳಿಗೆ ಮತ್ತಷ್ಟು ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ. ನಮ್ಮ ರೈತ ಸಂಘ, ಹಸಿರು ಸೇನೆ ಈ ಎರಡು ಹೋರಾಟದ ಬಳಗಗಳಾಗಿ, ಶಾಂತಿಯುತ ರೀತಿಯಲ್ಲಿ ರಾಜ್ಯ ಹಾಗೂ ಜಿಲ್ಲಾಡಳಿತದ ಗಮನ ಸೆಳೆಯಲು ಪ್ರತಿಭಟನೆ ನಡೆಸುತ್ತೇವೆ. ಸರ್ಕಾರ ರೈತರೊಂದಿಗೆ ನೇರ ಸಂವಾದ ನಡೆಸಬೇಕು. ಬರೆಯಲೆಂಬ ಮಟ್ಟದ ಪರಿಹಾರವಲ್ಲ, ಬದುಕಿಸುಹೆಚ್ಚೆಂಬ ಮಟ್ಟದ ಪರಿಹಾರ ನೀಡಬೇಕು ಎಂದು ಅನಿಲ್ ವ್ಯಕ್ತಪಡಿಸಿದರು.
ವಾಹನ ಸವಾರರಿಗೂ ತೊಂದರೆ: ತಾಲೂಕಿನಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು ರೈತರು ತಮ್ಮ ರಾಶಿಯನ್ನು ರೋಡ್ ಮೇಲೆ ಹಾಕುತ್ತಿದ್ದಾರೆ. ಇದರಿಂದ ರೈತರಿಗೆ ತೀರದ ಶೋಕ ಉಂಟಾಗಿದೆ, ಕೂಡಲೇ ರೈತರ ಈ ಸ್ಥಿತಿ ಬಗ್ಗೆ ಸರಕಾರ ಗಮನಹರಿಸಿ ಬೆಳೆಹಾನಿ ಪರಿಹಾರ ನೀಡಬೇಕು, ಇದರಿಂದ ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ, ಅಪಘಾತಗಳು ಆಗುವ ಸಾದ್ಯತೆ ಹೆಚ್ಚಾಗಿದೆ ಆದ್ದರಿಂದ ಸರಕಾರದ ವತಿಯಿಂದ ಪ್ರತಿ ಹಳ್ಳಿಗೂ ರೈತರಿಗಾಗಿ ಒಂದು ಸ್ಥಳ ವ್ಯವಸ್ಥೆ ಮಾಡಿಕೊಡಬೇಕಿದೆ ಎಂದು ಮೆದಕ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಡಾ.ಮಧುಸೂಧನ್ ರೆಡ್ಡಿ ಪಾಟೀಲ್ ವ್ಯಕ್ತಪಡಿಸಿದರು.
ನಾಶವಾಗಿರುವ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು: ಈ ವರ್ಷದ ರೈತರ ಬೆಳೆಗಳು ವಿಪರೀತ ಮಳೆಯಿಂದ ರೈತರ ಹೊಲದಲ್ಲಿ ಹೆಸರು ಮತ್ತು ಹುದ್ದು ಬೆಳೆಗಳು ಮೊಳಕೆ ಹೊಡೆಯುತ್ತಿವೆ ಮತ್ತು ಕೆಲವು ಬೆಳೆಗಳು ಭೂಮಿ ಮೇಲೆ ಬಿದ್ದು ಕೆಟ್ಟು ಹೋಗಿವೆ ತೊಗರಿ ಬೆಳೆಗಳು ನಟೇ ಸತ್ತು ಹೋಗಿವೆ ಇದಕ್ಕೆ ಸರಕಾರದಿಂದ ನಮ್ಮ ರೈತರಿಗೆ ನಾಶವಾಗಿರುವ ಬೆಳೆಗಳಿಗೆ ಸೂಕ್ತವಾದ ಬೆಲೆ ಒದಗಿಸಿ ಕೊಡಬೇಕೆಂದು ಸರಕಾರಕ್ಕೆ ಸಂಘಟನೆಯ ಮೂಲಕ ಮನವಿ ಮಾಡಿಕೊಳ್ಳುತ್ತೇವೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ವರದಾ ಸ್ವಾಮಿ ಬಿ ಹಿರೇಮಠ ಅವರು ಅಭಿಪ್ರಾಯಪಟ್ಟರು.
ಆದಷ್ಟು ಬೇಗ ಸರಕಾರ ರೈತರ ಸಮಸ್ಯೆ ಎಚ್ಚೆತ್ತುಕೊಂಡು ಕೂಡಲೇ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಕಾರ್ಯಧ್ಯಕ್ಷ ಸಾಬಪ್ಪ ಅಬ್ಬಗಲ್ ವ್ಯಕ್ತಪಡಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




