ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಹೈ ಕಮಾಂಡ್ ಸಿಎಂ ಹುದ್ದೆಯಿಂದ ಕೆಳಗಿಳಿಸಲಿದೆ ಎಂಬ ಸುದ್ದಿಗಳ ಮಧ್ಯೆ ಇದೀಗ ಸಚಿವ ಕೆ. ಎನ್ ರಾಜಣ್ಣ ಅವರು ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂದು ಹೇಳುವ ಮೂಲಕ ಮೂಲಕ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದಾರೆ.
ಆದರೆ ನಿನ್ನೆಯಷ್ಟೇ ಅಥಣಿಯಲ್ಲಿ ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ, ಏಕೆ ರಾಜೀನಾಮೆ ನೀಡಬೇಕು, ಅಂತಹ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಹೇಳಿದ್ದರು. ಸಚಿವ ಕೆ. ಎನ್ ರಾಜಣ್ಣ ಅವರು ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂದು ಹೇಳುವ ಮೂಲಕ ಕುತೂಹಲ ಕೆರಳಿಸಿದ್ದಾರೆ.
2028ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಆ ಸಂದರ್ಭದಲ್ಲಿ, ಸಮಯ, ಸನ್ನಿವೇಶ ನೋಡಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ಕ್ಲೇಮ್ ಮಾಡುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಈ ಹಿಂದೆ ಚಿಕ್ಕೋಡಿಯಲ್ಲಿ ಹೇಳಿದ್ದರು.
ಸತೀಶ ಜಾರಕಿಹೊಳಿ ಮುಂದಿನ ಬಾರಿ ರಾಜ್ಯದ ಮುಖ್ಯಮಂತ್ರಿಯಾಗುವ ಯೋಗ ಒಲಿದು ಬರಲಿದೆ ಎಂದು ಯರನಾಳ ಬ್ರಹ್ಮಾನಂದ ಸ್ವಾಮೀಜಿ ಕೂಡ ಏಪ್ರಿಲ್‌ನಲ್ಲೇ ಹೇಳಿದ್ದಾರೆ.
ಸಿಎಂ ಹುದ್ದೆಯನ್ನು ಬಿಟ್ಟುಕೊಡುವಂತೆ ಒಂದು ಕಡೆಯಿಂದ ಒಕ್ಕಲಿಗ ಸ್ವಾಮೀಜಿಗಳು, ಮತ್ತೊಂದು ಕಡೆಯಿಂದ ಲಿಂಗಾಯ ಸ್ವಾಮೀಜಿಗಳಿಂದ ಆಗ್ರಹಗಳು ಕೇಳಿಬಂದಿವೆ. ಅದೇ ರೀತಿ ದಲಿತರಿಗೆ ಸಿಎಂ ಸ್ಥಾನ ನೀಡಬೇಕೆಂಬ ಆಗ್ರಹವೂ ಚಾಲ್ತಿಯಲ್ಲಿದೆ.