ಚಿಕ್ಕಮಗಳೂರು : ಜಾತಿಗಣತಿ ವರದಿ ತಯಾರು ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ ಇರುವುದು. ಸರ್ಕಾರ ಯಾವುದೋ ಒಂದು ಜಾತಿಯನ್ನು ತುಷ್ಟೀಕರಣ ಮಾಡಲು ಜಾತಿಗಣತಿಗೆ ಮುಂದಾಗಿದೆ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಜಗದ್ಗುರುಗಳು ಕಿಡಿಕಾರಿದ್ದಾರೆ.
ಈ ಬಗ್ಗೆ ಮಾತನಾಡಿದ ಶ್ರೀಗಳು, ಜಾತಿವರದಿಯನ್ನು ಮಾಡಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿರುವುದು, ಆದರೆ ರಾಜ್ಯ ಸರ್ಕಾರ ವರದಿಯನ್ನು ತಯಾರು ಮಾಡಲು ಹೊರಟಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸರಿಯಾದ ಮಾಹಿತಿ ಕೆಲವೊಂದು ಸೂಚನೆಗಳನ್ನು ನೀಡಬೇಕು ಎಂದರು.
ಸರ್ಕಾರ ಯಾವುದೋ ಒಂದು ಜಾತಿಯನ್ನು ತುಷ್ಟೀಕರಣ ಮಾಡಲು ಜಾತಿಗಣತಿಗೆ ಮುಂದಾಗಿದೆ. ಹತ್ತಾರು ವರ್ಷಗಳಿಂದ ಜಾತಿಗಣತಿ ವರದಿ ನೆನೆಗುದಿಗೆ ಬಿದ್ದಿತ್ತು. ಜಾತಿಗಣತಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಸಂಘ ವಿರೋಧಿಸಿದೆ. ಸರ್ಕಾರ ಜಾತಿಗಣತಿ ವರದಿಯನ್ನು ಪಾರದರ್ಶಕವಾಗಿ ಮಾಡಿಲ್ಲ ಎಂದು ಶ್ರೀಗಳು ಆಕ್ರೋಶ ಹೊರಹಾಕಿದರು.
ಸರ್ಕಾರ ಮಾಡಿರುವ ಜಾತಿಗಣತಿ ಸರಿಯಾಗಿಲ್ಲ, ಇದನ್ನು ಪುನರ್‌ವಿಮರ್ಶೆ ಆಗಬೇಕು. ಅಧಿಕಾರಿಗಳು ಮನೆಮನೆಗೆ ಭೇಟಿ ಕೊಡಬೇಕು. ಜನರ ಭಾವನೆಯನ್ನು ಅರಿತು ಪಾರದರ್ಶಕತೆಯಿಂದ, ಮನೆಮನೆಗೆ ಭೇಟಿ ಕೊಟ್ಟು ಅಧಿಕಾರಿಗಳು ವರದಿ ತಯಾರಿಸಬೇಕು ಎಂದರು.
ಈಗಾಗಲೇ ಈ ಜಾತಿಗಣತಿ ವರದಿಗೆ ವಿರೋಧ ಪಕ್ಷ ಸೇರಿದಂತೆ ಹಲವಾರು ಜನ ಆಕ್ರೋಶ ಹೊರಹಾಕಿದ್ದು, ಮುಖ್ಯಮಂತ್ರಿಗಳು ಪುನರ್ ಪರಿಶೀಲನೆ ನಡೆಸಿ, ಜಾತಿಗಣತಿ ವರದಿಗೆ ಮುಂದಾದರೆ ಜನರಿಗೆ ಒಳಿತಾಗಲಿದೆ. ಇಲ್ಲವಾದರೆ ಜಾತಿ ಸಂಕಷ್ಟಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಕೆ ನೀಡಿದರು.