ಸಿರುಗುಪ್ಪ : ತಾಲೂಕಿನಲ್ಲಿ ಹರಿಯುವ ತುಂಗಾಭದ್ರ ವೇದಾವತಿ(ಹಗರಿ) ನದಿಗಳಿಂದಾಗಿ ಕೃಷಿ ಚಟುವಟಿಕೆಗೆ ಪೂರಕ ನೀರಾವರಿ ಪ್ರದೇಶದ ಸಂತಸ ಒಂದಡೆಯಾದರೆ ನದಿಗಳಲ್ಲಿ ಕಂಡುಬರುವ ಮೊಸಳೆಗಳಿಂದಾಗಿ ನದಿತೀರದ ಗ್ರಾಮಸ್ಥರಲ್ಲಿ ದಿನೇ ದಿನೇ ಭಯ ಭೀತಿಯಿಂದ ಹೆಚ್ಚುತ್ತಿದೆ.
ಕೆಲವು ವರ್ಷಗಳ ಹಿಂದೆಯಷ್ಟೇ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಮೊಸಳೆ ದಾಳಿಗೆ ಒರ್ವ ವ್ಯಕ್ತಿ ಬಲಿಯಾಗಿರುವ ಘಟನೆ ಜರುಗಿದ್ದು, ಈ ಬಗ್ಗೆ ಮಾಜಿ ಮತ್ತು ಹಾಲಿ ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ಮೊಸಳೆಗಳ ನಿಯಂತ್ರಣಕ್ಕೆ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ.
ಇತ್ತೀಚೆಗೆ ಕೂರಿಗನೂರು ಗ್ರಾಮದಲ್ಲೂ ಸಹ ಮೊಸಳೆಗಳ ಭೀತಿ ಹೆಚ್ಚಿದ್ದು ದಿನನಿತ್ಯದ ಕೃಷಿ, ದನ ಮೇಯಿಸುವುದು, ಇನ್ನಿತರ ಕಾರ್ಯಗಳಿಗಾಗಿ ತೆರಳುವ ಸಾರ್ವಜನಿಕರಿಗೆ ಜೀವ ಕೈಯಲ್ಲಿಟ್ಟುಕೊಂಡು ನದಿ ದಾಟುವಂತಾಗಿದೆ.
ಪಕ್ಕದಲ್ಲಿ ಹರಿಯುವ ವೇದಾವತಿ(ಹಗರಿ) ನದಿಯ ದಡದಲ್ಲಿ ಕೃಷಿ ಚಟುವಟಿಕೆಯ ನೀರಾವರಿಗಾಗಿ ಪಂಪ್‌ಸೆಟ್ ಚಾಲನೆಗೆ ಹೋಗುತ್ತೇವೆ.
ಮೊದಲಿನಿಂದಲೂ ದನಕರು, ಕುರಿ ಎಮ್ಮೆಗಳಿಗೆ ಮೇಯಿಸಲೆಂದು ನದಿತೀರದಲ್ಲೇ ಹೋಗುತ್ತಾರೆ.
ಈಗಾಗಿ ಜನ ಜಾನುವಾರುಗಳಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿದ್ದು, ಸಂಬಂದಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಗಮನವಹಿಸಿ ಮೊಸಳೆಗಳ ಸ್ಥಳಾಂತರಿಸಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕೆಂದು ಅಲ್ಲಿನ ರೈತರು ಒತ್ತಾಯಿಸಿದರು.
ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು, ದಿನೇ ದಿನೇ ಅಲ್ಲಲ್ಲಿ ಮೊಸಳೆ ಕಂಡುಬರುತ್ತಿವೆ. ಮಹಿಳೆಯರು ಬಟ್ಟೆ ತೊಳೆಯಲು, ಮಕ್ಕಳು ಈಜಾಡಲೆಂದು ಇಲ್ಲಿಗೆ ಬರುತ್ತಿರುತ್ತಾರೆ.
ಈ ಬಗ್ಗೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದಲ್ಲಿ ಡಂಗೂರ ಸಾರಬೇಕು ಮತ್ತು ಅರಣ್ಯ ಇಲಾಖೆಗಳಿಂದ ಜಾಗೃತಿ ನಾಮಫಲಕಗಳನ್ನು ಅಳವಡಿಸಬೇಕೆಂದು ಗ್ರಾಮಸ್ಥರಾದ ಸಣ್ಣ ಶೇಖಪ್ಪ, ಅಯ್ಯಪ್ಪ, ದ್ಯಾವಣ್ಣ, ವೀರೇಶ ಶೇಖಣ್ಣ ಆಗ್ರಹಿಸಿದರು.
ವರದಿ : ಶ್ರೀನಿವಾಸ ನಾಯ್ಕ