ಬೆಳಗಾವಿ : ಎಣ್ಣೆ ಏಟಲ್ಲಿ ಅನ್ಯಕೋಮಿ ವ್ಯಕ್ತಿಯೋರ್ವ ದೇವಸ್ಥಾನದ ಮೇಲೆ ಕಲ್ಲು ತೂರಿದ ಘಟನೆ ಬೆಳಗಾವಿ ನಗರದ ಪಾಂಗುಳ ಗಲ್ಲಿಯ ಅಶ್ವತ್ಥಾಮ ದೇವಸ್ಥಾನದಲ್ಲಿ ನಡೆದಿದೆ.
ಕಲ್ಲು ತೂರಿದ ವ್ಯಕ್ತಿಯನ್ನು ಉಜ್ವಲ್ ನಗರದ ನಿವಾಸಿ ಯಾಶೀರ್ ಎಂದು ಗುರುತಿಸಲಾಗಿದೆ. ಕಂಠಪೂರ್ತಿ ಕುಡಿದು ದೇವಸ್ಥಾನದ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ.
ಕಲ್ಲು ತೂರುತ್ತಿದ್ದಂತೆ ಸ್ಥಳಕ್ಕೆ ಸ್ಥಳೀಯರು ಆರೋಪಿ ಯಾಶೀರ್ ನನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಪ್ರಶ್ನಿಸಿದಾಗ ಆರಂಭದಲ್ಲಿ ಎಣ್ಣೆ ಏಟಲ್ಲಿ ಏರುದ್ವನಿಯಲ್ಲಿ ಮಾತನಾಡಿದ್ದಾನೆ. ಬಳಿಕ ಜನ ಸೇರುತ್ತಿದ್ದಂತೆ ನನ್ನದು ತಪ್ಪಾಗಿದೆ ಕ್ಷಮಿಸಿ ಬಿಡಿ ಎಂದು ಕೇಳಿಕೊಂಡಿದ್ದಾನೆ.
ಈ ವೇಳೆ ಮತ್ತೆ ಪ್ರಶ್ನೆ ಮಾಡಿದಾಗ ಮೊನ್ನೆ ಬುರ್ಕಾ ಹಾಕಿಕೊಂಡು ಡಾನ್ಸ್ ಮಾಡಿದ್ದೆವು ಎಂದು ಬಾಯ್ಬಿಟ್ಟಿದ್ದಾನೆ. ಸದ್ಯ ಲವ್ ಜಿಹಾದ್, ಕೋಮುಸಾಮರಸ್ಯದಿಂದಾಗಿ ಸುದ್ದಿಯಾಗುತ್ತಿರುವ ಬೆಳಗಾವಿಯಲ್ಲಿ ಇಂತಹ ಕಿಡಿಗೇಡಿಗಳು ಮಾಡುವ ಇಂತಹ ಕೃತ್ಯಗಳಿಂದ ಕೋಮು ವೈಷಮ್ಯದತ್ತ ವಾಲುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೇ ಕಿಡಿಗೇಡಿಗಳ ಈ ಕೃತ್ಯದಿಂದ ಎರಡೂ ಸಮಾಜಗಳ ನಡುವೆ ಬೆಂಕಿ ಇಡುವ ಕೆಲಸ ಮಾಡಲಾಗುತ್ತಿದೆ. ಇಂತಹ ಕೃತ್ಯ ಎಸಗುವ ಕಿಡಿಗೇಡಿಗಳಿಗೆ ಪೊಲೀಸರು ಆದಷ್ಟು ಬೇಗ ಬಿಸಿ ಮುಟ್ಟಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.