ರಾಜಸ್ಥಾನದ ರಾಜಸಮಂದ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಹೊಟೇಲ್‌ನಲ್ಲಿ ಊಟ ಮಾಡಿ ಬಿಲ್ ಪಾವತಿಸುತ್ತಿದ್ದಂತೆ ಕೊನೆಯುಸಿರೆಳೆದಿದ್ದಾರೆ. ಈ ಆಘಾತಕಾರಿ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾವು ಯಾವಾಗ ಹೇಗೆ ಬರುತ್ತದೆ ಎಂದು ಯಾರಿಗೂ ಹೇಳಲಾಗದು. ಇತ್ತೀಚೆಗಂತೂ ಹೃದಯಾಘಾತದಿಂದಾಗಿ ಅನೇಕರು ಹಠಾತ್ ಆಗಿ ಸಾವನ್ನಪ್ಪುತ್ತಿದ್ದಾರೆ. ದೊಡ್ಡವರು ಚಿಕ್ಕವರು, ಶಾಲೆಗೆ ಹೋಗುವ ಮಕ್ಕಳು, ಮಧ್ಯವಯಸ್ಕರು ಎಂಬ ಯಾವ ಬೇಧವನ್ನು ತೋರದೇ ಸಾವು ಹೃದಯಾಘಾತದ ರೂಪದಲ್ಲಿ ಬಂದು ಅನೇಕರನ್ನು ಈಗಾಗಲೇ ಜವರಾಯನ ಪಾದ ಸೇರಿಸಿದೆ. ಜಿಮ್ ಮಾಡುತ್ತಿರುವಾಗ, ನಡೆದು ಹೋಗುವಾಗ, ಶಾಲೆಯಲ್ಲಿ ಆಟವಾಡುವಾಗ ಹೀಗೆ ಸಮಯ ಸಂದರ್ಭದ ಎಣಿಕೆ ಇಲ್ಲದೇ ಈಗಾಗಲೇ ಹಲವು ಎಳೆ ಜೀವಗಳು ಹೃದಯಾಘಾತದಿಂದಾಗಿ ಯಮನ ಪಾದ ಸೇರಿದ್ದಾರೆ. ಇಂತಹದ್ದೇ ಮತ್ತೊಂದು ಘಟನೆ ಈಗ ರಾಜಸ್ಥಾನದಲ್ಲಿ ನಡೆದಿದ್ದು, ಅದರ ವೀಡಿಯೋ ವೈರಲ್ ಆಗಿದೆ.
ಬಿಲ್ ಪಾವತಿಸುತ್ತಿದ್ದಂತೆ ಸಾವು: ರಾಜಸ್ಥಾನದ ರಾಜಸಮಂದ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಹೊಟೇಲ್‌ನಲ್ಲಿ ಊಟ ಮಾಡಿ ಬಿಲ್ ಪಾವತಿಸುತ್ತಿದ್ದಂತೆ ಕೊನೆಯುಸಿರೆಳೆದಿದ್ದಾರೆ. ಈ ಆಘಾತಕಾರಿ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಯುವಕನೋರ್ವ ರೆಸ್ಟೋರೆಂಟ್‌ನ ಬಿಲ್ ಕೌಂಟರ್ ಮುಂದೆ ಬಿಲ್ ಪಾವತಿಸಲು ನಿಂತಿದ್ದಾನೆ. ಅಲ್ಲಿ ಆತ ಊಟವಾದ ನಂತರ ಹೊಟೇಲ್‌ಗಳಲ್ಲಿ ನೀಡುವ ಬಡೆಸೊಪ್ಪು ಅಥವಾ ಸೋಂಪು ಎಂದು ಕರೆಯುವ ಪದಾರ್ಥವನ್ನು ಒಂದು ಚಮಚದಲ್ಲಿ ತೆಗೆದುಕೊಂಡು ಬಾಯಿಗೆ ಹಾಕಿಕೊಂಡಿದ್ದಾನೆ. ನಂತರ ಕ್ಯಾಷಿಯರ್ ಆತನಿಗೆ ಬಿಲ್ ನೀಡಿದ್ದಾರೆ. ಅಷ್ಟೇ.. ಕ್ಷಣದಲ್ಲೇ ಆತ ಕುಸಿದು ನೆಲಕ್ಕೆ ಬಿದ್ದಿದ್ದು, ಅಲ್ಲೇ ಉಸಿರು ಚೆಲ್ಲಿದ್ದಾನೆ. ಹೃದಯಾಘಾತದಿಂದ ಆತನ ಸಾವು ಸಂಭವಿಸಿದೆ ಎಂದು ವರದಿಯಾಗಿದೆ.




