ಬೆಂಗಳೂರು: ರಾಜ್ಯದಲ್ಲಿರುವ ಕೈಗಾರಿಕೆಗಳು, ಕಾರ್ಖಾನೆಗಳು, ಇತರೆ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಮಸೂದೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಅನ್ನು ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರಿನ ಬಿಳೇಕಹಳ್ಳಿಯ ಸೋಮೇಶ್ವರ ಲೇಔಟ್ ನ ಲೆಕ್ಕಪರಿಶೋಧಕಿ ಆರ್.ಅಮೃತಲಕ್ಷ್ಮಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠದಲ್ಲಿ ಮಂಗಳವಾರ ನಡೆದಿದ್ದು, ಅರ್ಜಿಯನ್ನು ವಜಾಗೊಳಿಸಲಾಗಿದೆ.
ಅರ್ಜಿದಾರರ ಪರ ವಕೀಲರು, ಇದೇ ಮಾದರಿಯ ಕಾನೂನನ್ನು ಹರಿಯಾಣ ಸರ್ಕಾರ ರಚಿಸಿದ್ದನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರದ್ದುಪಡಿಸಿತ್ತು ಎಂದು ಹೇಳಿದ್ದಾರೆ.
ಅರ್ಜಿ ಪರಿಶೀಲಿಸಿದ ನ್ಯಾಯಪೀಠ, ಹರಿಯಾಣ ಸರ್ಕಾರ ತನ್ನ ರಾಜ್ಯದ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸಿ ಕಾಯ್ದೆ ರೂಪಿಸಿತ್ತು. ಕರ್ನಾಟಕದಲ್ಲಿ ವಿಧೇಯಕ ಕಾಯ್ದೆ ರೂಪದಲ್ಲಿ ಜಾರಿಗೆ ಬಂದಿಲ್ಲ. ಕರಡು ಸ್ವರೂಪದಲ್ಲಿದೆ. ಇದು ಕಾನೂನಿನ ಮಾನ್ಯತೆ ಪಡೆದಿಲ್ಲ. ಆದ್ದರಿಂದ ವಿಧೇಯಕ ಕಾನೂನಿನ ಗುಣಲಕ್ಷಣ ಹೊಂದಿರುವುದಾಗಿ ಭಾವಿಸಲಾಗದು ಎಂದು ಅಭಿಪ್ರಾಯಪಟ್ಟಿದೆ.
ಅರ್ಜಿದಾರರು ಆಕ್ಷೇಪಿಸಿರುವ ಮಸೂದೆ ಇನ್ನೂ ಕಾಯ್ದೆ ರೂಪದಲ್ಲಿ ಜಾರಿಗೆ ಬಂದಿಲ್ಲ ಎಂಬ ಅಭಿಪ್ರಾಯದೊಂದಿಗೆ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.