ಕಾರವಾರ: ಲಾರಿ ಚಾಲಕರೊಬ್ಬರಿಗೆ ಹೆಲ್ಮೆಟ್ ಧರಿಸಿಲ್ಲ ಎಂದು ಪೊಲೀಸರು ದಂಡ ವಿಧಿಸಿರುವ ವಿಚಿತ್ರ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.
ಚಂದ್ರಕಾಂತ್ ಹಳ್ಳೇರ ಎಂಬುವವರು ಮರಳು ತುಂಬಿದ ಟಿಪ್ಪರ್ ಲಾರಿ ಚಲಾಯಿಸುತ್ತಿದ್ದರು. ಈ ವೇಳೆ ಹೊನ್ನಾವರ ಸಂಚಾರಿ ಪೊಲೀಸರು ಅಳಂಕಿ ಎಂಬಲ್ಲಿ ತಡೆದು 500 ರೂಪಾಯಿ ದಂಡ ವಿಧಿಸಿ ರಶೀದಿ ನೀಡಿದ್ದಾರೆ.
ರಶೀದಿ ನೋಡಿದ ಚಾಲಕ ಶಾಕ್ ಆಗಿದ್ದಾರೆ. ರಶೀದಿಯಲ್ಲಿರುವ ದಂಡ ವಿಥೌಟ್ ಹೆಲ್ಮೆಟ್ ಗೆ ಎಂದಿದೆ.ಈ ವೇಳೆ ಚಾಲಕ ತಾನು ಬೈಕ್ ಓಡಿಸುತ್ತಿಲ್ಲ, ಟಿಪ್ಪರ್ ಲಾರಿ ಓಡಿಸುತ್ತಿದ್ದೇನೆ ಎಂದು ಪೊಲಿಸರಿಗೆ ಹೇಳಿದರೂ ಹೇ ಅದೆಲ್ಲ ಇರುತ್ತೆ ಎಂದು ಹೇಳಿ ರಶೀದಿ ಕೊಟ್ಟು ಕಳುಹಿಸಿದ್ದಾರೆ. ಪೊಲೀಸರ ದಂಡದ ಎಡವಟ್ಟಿನ ರಶೀದಿ ಎಲ್ಲೆಡೆ ವೈರಲ್ ಆಗಿದೆ.