ತುರುವೇಕೆರೆ : ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡುತ್ತಿದ್ದವರಿಗೆ ಪಟ್ಟಣದಲ್ಲಿ ಇಂದು ಪೊಲೀಸರು ದಂಡ ವಿಧಿಸಿದ್ದಲ್ಲದೆ ಮುಂದೆ ಸಂಚಾರಿ ಕಾನೂನನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂಬ ಪಾಠವನ್ನು ಮಾಡಿ ಕಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯ ಬಳಿಯೇ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಬ್ರೇಕ್ ಹಾಕಿದ ಪೊಲೀಸರು ನಿಗದಿತ ದಂಡ ಶುಲ್ಕವನ್ನು ವಸೂಲು ಮಾಡಿ ಮುಂದೆ ನಿಯಮ ಉಲ್ಲಂಘಿಸದಂತೆ ಎಚ್ಚರಿಕೆ ರವಾನಿಸಿದರು.

ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ರೈಡಿಂಗ್, ಹೆಲ್ಮೆಟ್ ಇಲ್ಲದೆ ಹಾಗೂ ಮೊಬೈಲ್ ನಲ್ಲಿ ಮಾತನಾಡುತ್ತಾ ವಾಹನ ಓಡಿಸುವುದು, ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಚಾಲನೆ, ಮದ್ಯಪಾನ ಸೇವಿಸಿ ವಾಹನ ಚಾಲನೆ, ಅಪ್ರಾಪ್ತ ವಯಸ್ಸಿನವರು ದ್ವಿಚಕ್ರ ವಾಹನ ಚಾಲನೆ ಸೇರಿದಂತೆ ಸಂಚಾರಿ ಕಾನೂನು ನಿಯಮಗಳನ್ನು ಉಲ್ಲಂಘಿಸಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಬಹುತೇಕರನ್ನು ಪೊಲೀಸರು ನಿಲ್ಲಿಸಿ ಬುದ್ದಿವಾದದ ಜೊತೆಗೆ ದಂಡವನ್ನು ವಸೂಲು ಮಾಡಿದ್ದಾರೆ.
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮೂರ್ತಿ ಮಾತನಾಡಿ, ಸಂಚಾರಿ ಕಾನೂನುಗಳನ್ನು ಕಡ್ಡಾಯವಾಗಿ ಪಾಲಿಸುವುದರಿಂದ ಜನರಿಗೆ ಹಾಗೂ ಅವರ ಕುಟುಂಬಕ್ಕೆ ಒಳ್ಳೆಯದು. ಯುವಕರು, ಮಹಿಳೆಯರು, ನಾಗರೀಕರು ಹೊಸ ವರ್ಷದ ಆಗಮನದ ಸಂಭ್ರಮದಲ್ಲಿ ನಲಿಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಾಹನ ಸಂಚಾರ ಎಂದಿಗಿಂತ ಹೆಚ್ಚಿರುತ್ತದೆ, ನಿಯಮ ಉಲ್ಲಂಘಿಸಿ ಸಂಚಾರ ನಡೆಸುವುದರಿಂದ ಅಪಾಯವೂ ಸಹ ಅಷ್ಟೇ ಇರುತ್ತದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಅಗತ್ಯವಿದೆ ಎಂದರು.
ಅಪ್ರಾಪ್ತ ವಯಸ್ಸಿನವರಿಗೆ ವಾಹನ ನೀಡಬೇಡಿ ಎಂದು ಪ್ರತಿನಿತ್ಯ ಮಾಧ್ಯಮಗಳಲ್ಲಿ ಹೇಳುತ್ತಲೇ ಇರುತ್ತೇವೆ, ಆದರೂ ಪೋಷಕರು ತಮ್ಮ ಮಕ್ಕಳಿಗೆ ದ್ವಿಚಕ್ರ ವಾಹನ ನೀಡುತ್ತಿದ್ದಾರೆ, ಇದರಿಂದ ಕಾನೂನು ಉಲ್ಲಂಘನೆಯಾಗುತ್ತದೆ, ಅಲ್ಲದೆ ಅನಾಹುತ ಸಂಭವಿಸಿದರೆ ಅದರ ನೋವನ್ನು ಆ ಕುಟುಂಬವೇ ಅನುಭವಿಸಬೇಕಾಗುತ್ತದೆ. ವಾಹನ ಚಾಲನಾ ಪರವಾನಗಿ ಹೊಂದುವವರೆಗೆ ಮಕ್ಕಳಿಗೆ ವಾಹನ ನೀಡಬಾರದು. ಮಧ್ಯಪಾನ ಸೇವಿಸಿ ವಾಹನ ಚಾಲನೆ ಮಾಡುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಮದ್ಯಪಾನಿಗಳು ವಾಹನ ಚಲಾಯಿಸುವಾಗ ಅನಾಹುತವಾದರೆ ತಮ್ಮ ಜೀವದ ಜೊತೆಗೆ ಕುಟುಂಬವೂ ಸಂಕಷ್ಟದಲ್ಲಿ ಸಿಲುಕುತ್ತದೆಂಬ ಯೋಚನೆ ಮಾಡಬೇಕಿದೆ. ಎಲ್ಲಾ ನಾಗರೀಕರು ಕಡ್ಡಾಯವಾಗಿ ಸಂಚಾರಿ ಕಾನೂನಿನ ನಿಯಮಗಳನ್ನು ಪಾಲಿಸುವುದರಿಂದ ಅವರಷ್ಟೇ ಅಲ್ಲ ಅವರ ಕುಟುಂಬವೂ ಸುರಕ್ಷಿತವಾಗಿರುತ್ತದೆ ಎಂಬುದನ್ನು ಮನಗಾಣಬೇಕಿದೆ ಎಂದರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ರಾಕೇಶ್, ನಾಗರಾಜ್, ರವಿಕುಮಾರ್ ಉಪಸ್ಥಿತರಿದ್ದರು.




