ದಾವಣಗೆರೆ: ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಪಾತಾಳಕ್ಕೆ ಇಳಿದಿದೆ. ಹೀಗಾಗಿ, ರೈತರು ಕಂಗಾಲಾಗಿದ್ದಾರೆ. ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ಮಾಯಕೊಂಡ ಸೇರಿದಂತೆ ಸುತ್ತಮುತ್ತಲ ರೈತರು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬೆಳೆದಿದ್ದರು. ಆದರೆ, ದಿಢೀರ್ ದರ ಕುಸಿತದಿಂದ ಈ ಭಾಗದ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಇದೇ ನಿರಾಸೆಯಿಂದ ಅದೆಷ್ಟೋ ರೈತರು ಟೊಮೆಟೊ ಕಟಾವು ಮಾಡದೇ ತಮ್ಮ ಜಮೀನಿನಲ್ಲೇ ಬಿಟ್ಟಿದ್ದಾರೆ. 25 ಕೆ.ಜಿಯ ನಾಲ್ಕು ಬಾಕ್ಸ್ ಟೊಮೆಟೊಗೆ ಕೇವಲ 100 ರೂಪಾಯಿ ದರ ಸಿಗುತ್ತಿದೆ. ಇದನ್ನು ಮಾರಾಟ ಮಾಡುವುದಕ್ಕಿಂತ ಹೊಲದಲ್ಲೇ ಬಿಡುವುದು ಸೂಕ್ತ ಎಂದು ರೈತರು ನಿರ್ಧರಿಸಿದ್ದಾರೆ.
ಹೊನ್ನಾಳಿ, ನ್ಯಾಮತಿ, ಹರಿಹರ, ಜಗಳೂರು, ಮಾಯಕೊಂಡ ಭಾಗಗಳಲ್ಲಿ ಟೊಮೆಟೊಗೆ ಆದ್ಯತೆ ನೀಡಲಾಗುತ್ತದೆ. ಉಳಿದ ಭಾಗಕ್ಕಿಂತ ಇಲ್ಲಿ ಹೆಚ್ಚು ಟೊಮೆಟೊ ಬೆಳೆಯುವುದುಂಟು. ಈ ಮೊದಲು ದರ ಉತ್ತಮವಾಗಿತ್ತು. ಹೀಗಾಗಿ, ಹೆಚ್ಚೆಚ್ಚು ಟೊಮೆಟೊ ಬೆಳೆಯಲು ಮುಂದಾಗಿದ್ದರು. ಆದರೆ, ಹಾಠಾತ್ ದರ ಕುಸಿತ ರೈತರಿಗೆ ಆಘಾತ ನೀಡಿದೆ. ಇದರಿಂದಾಗಿ ಮಾಯಕೊಂಡ, ಆನಗೋಡು ಹೋಬಳಿಗಳ ಹಲವಾರು ಜಮೀನುಗಳಲ್ಲಿ ಟೊಮೆಟೊ ಹಾಗೆಯೇ ಕೊಳೆಯುತ್ತಿದೆ. ಆದರೂ, ಕೆಲವು ರೈತರು ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಬರಬಹುದು ಎಂಬ ನಿರೀಕ್ಷೆಯಿಂದ 35ರಿಂದ 100 ಹೆಕ್ಟೇರ್ ಪ್ರದೇಶದಲ್ಲಿ ಮತ್ತೆ ಟೊಮೆಟೊ ನಾಟಿ ಮಾಡಿದ್ದಾರೆ.
ಹೇಗಿದೆ ಈಗಿನ ಬೆಲೆ?: ಪ್ರಸ್ತುತ ಟೊಮೆಟೊ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ 2ರಿಂದ 4 ರೂ.ಗೆ ಮಾರಾಟವಾಗುತ್ತಿದೆ. 25 ಕೆ.ಜಿ ಟೊಮೆಟೊ ಬಾಕ್ಸ್‌ಗೆ ಕೇವಲ 40ರಿಂದ 50 ರೂ. ಸಿಗುತ್ತಿದೆ. ಹೀಗಾಗಿ ಕೆಲವೆಡೆ ರೈತರು ಜಮೀನಿನ ಟೊಮೆಟೊ ಕೀಳದೆ ಹಾಗೆಯೇ ಬಿಟ್ಟಿದ್ದಾರೆ.