ಸಿರುಗುಪ್ಪ: ನಗರದ ಪ್ರೌಡಶಾಲಾ ಆವರಣದಲ್ಲಿನ ವಸತಿ ನಿಲಯಗಳ ಕಸದ ತ್ಯಾಜ್ಯದಲ್ಲಿ ವಿಷಜಂತುಗಳು ಸೇರಿಕೊಳ್ಳುತ್ತಿದ್ದು, ಅಲ್ಲಿರುವ ಸುಮಾರು ನಾಲ್ಕು ವಸತಿ ನಿಲಯಗಳಲ್ಲಿರುವ ಹಿಂದುಳಿದ ಮತ್ತು ದಲಿತ ವಿದ್ಯಾರ್ಥಿಗಳ ಗೋಳು ಕೇಳುವವರು ಇಲ್ಲದಂತಾಗಿದೆ.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಅಂಟಿಕೊಂಡಿರುವ ಹೆಚ್ಚುವರಿ ಕೊಠಡಿಯ ಮುಂಭಾಗದಲ್ಲಿ ಆವರಣದಲ್ಲಿನ ತ್ಯಾಜ್ಯದಲ್ಲಿ ಹಾಗೂ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಮುಂಭಾಗದಲ್ಲಿ ಕಸ ಹಾಗೂ ವ್ಯರ್ಥ ಸಸ್ಯಗಳ ಬೆಳೆದ ಜಾಗದಲ್ಲಿ ವಿಷಜಂತುಗಳು ಸೇರಿಕೊಳ್ಳುತ್ತಿದ್ದು, ಸಂಬಂದಿಸಿದ ನಿಲಯ ಪಾಲಕರಾಗಲೀ ಇಲಾಖೆಗಳಾಗಲೀ ಗಮನವಹಿಸುತ್ತಿಲ್ಲ.
ಸೋಮವಾರದಂದು ಸಾಯಂಕಾಲ ಹಾವು ತ್ಯಾಜ್ಯದಲ್ಲಿ ಸೇರಿಕೊಂಡಿದ್ದು ಅದನ್ನು ಹಿಡಿದು ಸಾಯಿಸಲು ವಿದ್ಯಾರ್ಥಿ ನಿಲಯಗಳ ಸಿಬ್ಬಂದಿಗಳು ಹರಸಾಹಸ ಪಡಬೇಕಾಯಿತು.

ವಿದ್ಯಾರ್ಥಿ ನಿಲಯದಲ್ಲಿದ್ದ ನಿಲಯ ಪಾಲಕರಾದ ಮೌನೇಶ ಅವರು ಕಸ ವಿಲೇವಾರಿಗೆ ನಗರಸಭೆಗೆ ಮಾಹಿತಿ ನೀಡಲಾಗಿದೆ. ವಾಹನಗಳ ಸಮಸ್ಯೆಯಿಂದಾಗಿ ಅವರು ಬರುತ್ತಿಲ್ಲವೆಂದು ತಿಳಿಸಿದರು.
ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ರಂಗಸ್ವಾಮಿ ಅವರನ್ನು ಸಂಪರ್ಕಿಸಿದಾಗ ಹೌದು ವಾರದ ಹಿಂದೆ ನಮಗೆ ದೂರವಾಣಿ ಸಂಪರ್ಕದಲ್ಲಿ ಮಾತನಾಡಿದ್ದಾರೆ. ಅದು ಅವರ ಕಟ್ಟಡದ ದುರಸ್ತಿಯ ತ್ಯಾಜ್ಯವಾದ್ದರಿಂದ ಅವರೇ ವಿಲೇವಾರಿ ಮಾಡಬೇಕು. ನಮಗೆ ಸಂಬದಿಸುವುದಿಲ್ಲವೆಂದು ಹಾರಿಕೆ ಉತ್ತರ ನೀಡಿದರು.
ನಗರಸಭೆ ಆಯುಕ್ತರಾದ ಗಂಗಾಧರ ಅವರನ್ನು ಸಂಪರ್ಕಿಸಿದಾಗ ಕಸವನ್ನು ಯಾರೇ ನೀಡಿದರೂ ಅದನ್ನು ಸ್ವೀಕರಿಸಬೇಕಾಗಿರುವುದು ನಮ್ಮ ಜವಾಬ್ದಾರಿ ಹಾಗಾಗಿ ಅದನ್ನು ಮರುದಿನವೇ ವಿಲೇವಾರಿ ಮಾಡಲಾಗುವುದು ಎಂದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಡ್ಡೇರು ಸಿದ್ದಯ್ಯ ಅವರು ಒಂದು ಹಾವು ಬಂದರೆ ವರದಿ ಮಾಡುವಿರಾ?. ಇರಲಿ ಬಿಡಿ ವಿದ್ಯಾರ್ಥಿ ನಿಲಯಗಳ ಸುತ್ತಮುತ್ತಲಿನ ಆವರಣವನ್ನು ಸ್ವಚ್ಛಗೊಳಿಸಿ ನಾಳೆಯೇ ನಿಮಗೆ ಪೋಟೋ ಹಾಕುವುದಾಗಿ ಭರವಸೆ ನೀಡಿದರು. ಆದರೆ ಎರಡು ದಿನಗಳು ಕಳೆದರೂ ಕಸ ಮಾತ್ರ ಅಲ್ಲಿಯೇ ಬಿದ್ದಿದೆ.
ಸುತ್ತಮುತ್ತಲು ಬೆಳೆದ ವ್ಯರ್ಥ ಸಸ್ಯ ಹಾಗೂ ಎಲ್ಲೆಂದರಲ್ಲಿ ಬಿದ್ದಿರುವ ತ್ಯಾಜ್ಯದಲ್ಲಿ ಹಾವುಗಳು ಬರುತ್ತಿರುವುದು ಕಣ್ಣಾರೆ ಕಂಡರೂ ಸಹ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳ ನಡೆಯನು ಪ್ರಶ್ನಿಸುವುದು ತಪ್ಪಾಗಿದೆ. ಯಾರಿಗೆ ಏನಾದರೂ ಅವರಿಗೇನು ಸಮಸ್ಯೆ ತಮ್ಮ ಮಕ್ಕಳು ಮಾತ್ರ ಸಕಲ ಸೌಲಭ್ಯಗಳುಳ್ಳ ಖಾಸಗಿ ಶಾಲಾ ಮತ್ತು ವಸತಿ ನಿಲಯಗಳಲ್ಲಿ ಓದಿಸುತ್ತಾರೆ.
ಬಡಮಕ್ಕಳ ಗೋಳು ಕೇಳುವವರು ಯಾರೆಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಆವರಣದೆಲ್ಲೆಡೆ ಕಸ ಹೆಚ್ಚಾಗಿದ್ದು, ವಾಯು ವಿಹಾರಿಗಳಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.
ಇನ್ನು ಮುಂದಾದರೂ ಸಂಬಂದಿಸಿದ ಇಲಾಖೆಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಬಗ್ಗೆ ಗಮನವಹಿಸಿ ಅಪಾಯದ ಮುನ್ನವೇ ಎಚ್ಚೆತ್ತು ವಸತಿ ನಿಲಯಗಳ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಯ ಗಮನವಹಿಸಬೇಕೆಂಬುದು ಪೋಷಕರ ಒತ್ತಾಯವಾಗಿದೆ.
ವರದಿ : ಶ್ರೀನಿವಾಸ ನಾಯ್ಕ




