ನಿನ್ನೆ ದೇಶಾದ್ಯಂತ ಜನರು ಯುಪಿಐ ವಹಿವಾಟುಗಳಲ್ಲಿ ಸಮಸ್ಯೆ ಎದುರಿಸಿದ್ದಾರೆ. ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮತ್ತು ಹಲವು ಬ್ಯಾಂಕ್‌ಗಳ ಆ್ಯಪ್ ಮೂಲಕ ಯುಪಿಐ ವಹಿವಾಟು ನಡೆಸುವಾಗ ಸಮಸ್ಯೆಗಳು ತಲೆದೋರಿವೆ ಎಂದು ಅನೇಕರು ಸಾಮಾಜಿಕ ಜಾಲತಾಣಗಳ ಮೂಲಕ ದೂರಿದ್ದಾರೆ.
ಡೌನ್‌ಡೆಕ್ಟರ್‌ನ ವರದಿ ಪ್ರಕಾರ, ಯುಪಿಐನಲ್ಲಿ ಸಮಸ್ಯೆ ನಿನ್ನೆ ಸಂಜೆಯಿಂದ ಪ್ರಾರಂಭವಾಯಿತು. ಜನರು ಹಣ ವರ್ಗಾಯಿಸುವುದು ಮತ್ತು UPI ಅಪ್ಲಿಕೇಶನ್‌ಗಳಿಗೆ ಲಾಗಿನ್ ಆಗಲು ತೊಂದರೆ ಅನುಭವಿಸಿದರು.
ಪೇಟಿಎಂ, ಫೋನ್‌ಪೇ, ಗೂಗಲ್ ಪೇ ಮುಂತಾದ ಯುಪಿಐ ಅಪ್ಲಿಕೇಶನ್‌ಗಳ ಮೂಲಕ ವಹಿವಾಟು ನಡೆಸುವಾಗ ಸಮಸ್ಯೆ ಎದುರಿಸಿದ ನಂತರ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದರು. ಹೀಗಾಗಿ, ಸಂಜೆ 7 ಗಂಟೆಯ ಸುಮಾರಿಗೆ 23 ಸಾವಿರಕ್ಕೂ ಹೆಚ್ಚು ಜನರು ಆನ್‌ಲೈನ್ ಮೂಲಕ ದೂರು ದಾಖಲಿಸಿದ್ದರು.
ಡೌನ್ ಡಿಟೆಕ್ಟರ್ ಪ್ರಕಾರ, ಗೂಗಲ್ ಪೇಯಲ್ಲಿ ಯುಪಿಐ ವಹಿವಾಟು ನಡೆಸುವ ಬಳಕೆದಾರರು ಹೆಚ್ಚಿನ ಪಾವತಿ ವೈಫಲ್ಯ ಸಮಸ್ಯೆ ಎದುರಿಸಿದ್ದಾರೆ. ಇದು ಸುಮಾರು ಶೇ.72 ರಷ್ಟಿತ್ತು. ಶೇ.14ರಷ್ಟು ಜನರು ವೆಬ್ಸೈಟ್ಗೆ ಸಂಬಂಧಿತ ಸಮಸ್ಯೆಗಳನ್ನು ಮತ್ತು ಶೇ.14ರಷ್ಟು ಜನರು ಅಪ್ಲಿಕೇಶನ್ ಸಂಬಂಧಿತ ಸಮಸ್ಯೆ ಕಂಡಿದ್ದಾರೆ. ಪೇಟಿಎಂನಲ್ಲಿ ಶೇ.86ರಷ್ಟು ಬಳಕೆದಾರರು ಪಾವತಿ ವೈಫಲ್ಯದ ಬಗ್ಗೆ ದೂರು ನೀಡಿದರೆ, ಶೇ.9ರಷ್ಟು ಬಳಕೆದಾರರು ಲಾಗಿನ್ ಆಗುವಲ್ಲಿ ಮತ್ತು ಶೇ.6ರಷ್ಟು ಬಳಕೆದಾರರು ಖರೀದಿ ಮಾಡುವಲ್ಲಿನ ಸಮಸ್ಯೆಗಳ ಬಗ್ಗೆ ದೂರು ನೀಡಿ ಆಕ್ರೋಶ ಹೊರಹಾಕಿದ್ದಾರೆ.
ಬ್ಯಾಂಕಿಂಗ್ ಸೇವೆಗಳಲ್ಲಿ ಸಮಸ್ಯೆ: ಅನೇಕ ಬ್ಯಾಂಕುಗಳ ಸೇವೆಗಳ ಮೇಲೂ ಇದು ಭಾರಿ ಪರಿಣಾಮ ಬೀರಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ಗೆ ಸಂಬಂಧಿಸಿದಂತೆ ಶೇ.47ರಷ್ಟು ಬಳಕೆದಾರರು ಹಣ ವರ್ಗಾವಣೆಯಲ್ಲಿ ವಿಫಲತೆಯ ಬಗ್ಗೆ ದೂರು ನೀಡಿದರೆ, ಶೇ.37ರಷ್ಟು ಬಳಕೆದಾರರು ಮೊಬೈಲ್ ಬ್ಯಾಂಕಿಂಗ್ ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ. ಶೇ.16ರಷ್ಟು ಬಳಕೆದಾರರು ಆನ್‌ಲೈನ್ ಬ್ಯಾಂಕಿಂಗ್‌ನಲ್ಲಿನ ಸಮಸ್ಯೆಗಳ ಬಗ್ಗೆ ದೂರಿದ್ದಾರೆ. ಒಟ್ಟಾರೆ ಶೇ.84ರಷ್ಟು ಬಳಕೆದಾರರು UPI ಪಾವತಿ ವೈಫಲ್ಯದ ಬಗ್ಗೆ ದೂರು ಕೊಟ್ಟಿದ್ದಾರೆ.