ಬೆಳಗಾವಿ : ಇತ್ತೀಚೆಗೆ ರಾಜ್ಯದಲ್ಲಿ ಗೋಮಾಂಸ ಸಾಗಾಟ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಇದೀಗ ಆಂಧ್ರ ಪ್ರದೇಶದ ಹೈದರಾಬಾದ್ ಗೆ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಹಿಂದೂ ಕಾರ್ಯಕರ್ತರು ತಡೆದು ಲಾರಿಗೆ ಬೆಂಕಿ ಹಚ್ಚಿದ ಘಟನೆ ಬೆಳಗಾವಿಯ ಐನಾಪುರದಲ್ಲಿ ನಡೆದಿದೆ.
ರಾಯಭಾಗದ ಕುಡಚಿ ಪಟ್ಟಣದಿಂದ ಹೈದರಾಬಾದ್ ಗೆ ಅಕ್ರಮವಾಗಿ ಗೋ ಮಾಂಸವನ್ನು ಸಾಗಿಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ಸಾರ್ವಜನಿಕರು ಐನಾಪುರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಬಳಿ ರಾತ್ರಿ 10 ಗಂಟೆಯ ಸುಮಾರಿಗೆ ಲಾರಿಯನ್ನ ತಡೆಸಿದ್ದಾರೆ.
ಲಾರಿಯನ್ನು ತಡೆಯುತ್ತಿದ್ದಂತೆ ಒಂದಿಷ್ಟು ಜನ ಚಾಲಕನನ್ನು ಹಿಡಿದು ವಿಚಾರಿಸಿದ್ದಾರೆ ಈ ವೇಳೆ ಗೋಮಾಂಸ ಎಂದು ತಿಳಿಸಿದ್ದಾನೆ. ಬಳಿಕ ಪರಿಶೀಲಿಸಿದಾಗ ಅಪಾರ ಪ್ರಮಾಣ ಮಾಂಸ ಇರುವುದು ಪತ್ತೆಯಾಗಿದೆ. ಕೂಡಲೇ ಚಾಲಕನಿಗೆ ಥಳಿಸಿ ಲಾರಿಗೆ ಬೆಂಕಿ ಹಚ್ಚಿದ್ದಾರೆ. ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಸ್ಥಳೀಯ ಪೊಲೀಸರು ಆಗಮಿಸಿದ್ದಾರೆ.
ಆದರೆ ಅಷ್ಟರಲ್ಲಿ ಲಾರಿ ಅರ್ಧದಷ್ಟು ಸುಟ್ಟು ಹೋಗಿತ್ತು. ಲಾರಿಯಲ್ಲಿ ಬರೋಬ್ಬರಿ ಐದು ಟನ್ ಗೂ ಹೆಚ್ಚು ಗೋಮಾಂಸ ಇತ್ತು ಎನ್ನಲಾಗಿದ್ದು, ಇದನ್ನು ಹೈದರಾಬಾದ್ ಗೆ ಸಾಗಾಟ ಮಾಡಲಾಗುತ್ತಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಗವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.




