ಸವದತ್ತಿ : ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಮಾಹಿತಿ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂಬ ನಿಯಮವಿದ್ದರೂ ಸವದತ್ತಿ ತಾಲೂಕಾ ಆರೋಗ್ಯಾಧಿಕಾರಿ ಕಾರ್ಯಾಲಯದಲ್ಲಿ ಮಾಹಿತಿ ಹಕ್ಕು ನಾಮಫಲಕ ಮಾಯವಾಗಿದೆ.ಈ ಮಾಹಿತಿ ಹಕ್ಕು ಫಲಕವಿಲ್ಲದಿರುವುದು ಆಶ್ಚರ್ಯ ಮೂಡಿಸಿದೆ. ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.
ಮಾಹಿತಿ ಹಕ್ಕು ಅದಿನಿಯಮ 2005ರಡಿ ಪ್ರತಿ ಇಲಾಖೆಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನೆ ಪ್ರಾಧಿಕಾರದ ಹೆಸರುಗಳನ್ನು ನಾಮಫಲಕದಲ್ಲಿ ಬರೆಯಿಸಿ ಹಾಕುವಂತೆ ಸುತ್ತೋಲೆ ಹೊರಡಿಸಲಾಗಿದೆ. ಆದರೆ ಅಧಿಕಾರಿಗಳು ಮಾಹಿತಿ ಹಕ್ಕು ಅಧಿನಿಯಮ ಓದದೆ ಜನರನ್ನು ದಾರಿ ತಪ್ಪಿಸುತ್ತಿರುವುದು ಕಂಡು ಬರುತ್ತಿವೆ. ಇಲಾಖೆಗಳಲ್ಲಿ ನಡೆಯುವ ಅಕ್ರಮ ಮುಚ್ಚಿ ಹಾಕಲು ಮತ್ತು ಮಾಡಿರುವ ತಪ್ಪಿನಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳು ಈ ರೀತಿಯಾಗಿ ಮಾಹಿತಿ ಹಕ್ಕು ನಾಮಫಲಕ ಹಾಕುವುದಿಲ್ಲ ಎಂದು ಭಾಸವಾಗುತ್ತದೆ.
ಈ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಅಧಿಕಾರಿಗಳ ಕಾರ್ಯವೈಖರಿ ಪ್ರಶ್ನಿಸುವ ಯಾರು ಎಂಬುವುದು ಯಕ್ಷಪ್ರಶ್ನೆಯಾಗಿದೆ. ಈಗಲಾದರೂ ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿಗಳು ಇಲ್ಲಿ ಮಾಹಿತಿ ಹಕ್ಕಿನ ಫಲಕ ಹಾಕಿಸುವರೇ ಕಾದುನೋಡಬೇಕಾಗಿದೆ.
ವರದಿ : ಗುರುರಾಜ ಹಂಚಾಟೆ




