Ad imageAd image

ಗ್ರಾಮೀಣ ಮಹಿಳೆಯರ ಸ್ವಾವಲಂಬಿ ಬದುಕಿನಲ್ಲಿ ಬಜ್ ಸಂಸ್ಥೆ ಪಾತ್ರ ಶ್ಲಾಘನೀಯ

Bharath Vaibhav
ಗ್ರಾಮೀಣ ಮಹಿಳೆಯರ ಸ್ವಾವಲಂಬಿ ಬದುಕಿನಲ್ಲಿ ಬಜ್ ಸಂಸ್ಥೆ ಪಾತ್ರ ಶ್ಲಾಘನೀಯ
WhatsApp Group Join Now
Telegram Group Join Now

ತುರುವೇಕೆರೆ : ಕಾನೂನಾತ್ಮಕವಾಗಿ ಸರ್ಕಾರಗಳು ಮಹಿಳೆಯರಿಗೆ ಸಾಕಷ್ಟು ಶಕ್ತಿಯನ್ನು ನೀಡಿದೆ. ಆದರೆ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಆತ್ಮವಿಶ್ವಾಸ ಹಾಗೂ ಸ್ವ ಉದ್ಯೋಗ ತರಬೇತಿಯ ಅಗತ್ಯವಿದೆ. ಬಜ್ ಇಂಡಿಯಾದಂತಹ ಸಂಸ್ಥೆಗಳು ಗ್ರಾಮೀಣ ಮಹಿಳೆಯರಿಗೆ ಅಗತ್ಯ ಮಾರ್ಗದರ್ಶನ, ತರಬೇತಿ ನೀಡಿ ಮಹಿಳಾ ಸಬಲೀಕರಣಕ್ಕೆ, ಸ್ವಾವಲಂಬಿ ಬದುಕಿಗೆ ದುಡಿಯುತ್ತಿರುವುದು ಶ್ಲಾಘನೀಯ ಎಂದು ವಕೀಲ ಕೆ. ನಾಗೇಶ್ ತಿಳಿಸಿದರು.

ಪಟ್ಟಣದ ಶ್ರೀ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಬಜ್ ಇಂಡಿಯಾದಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಎತ್ತಿನ ಗಾಡಿಯ ಚಕ್ರವನ್ನು ತಿರುಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಬಜ್ ಇಂಡಿಯಾ ಸಂಸ್ಥೆ ಗ್ರಾಮೀಣ ಸಂಸ್ಕೃತಿ, ಪರಂಪರೆಯೊಂದಿಗೆ ಮಿಡಿತ ಹೊಂದಿದೆ. ಸಾವಯವ ಕೃಷಿಗೆ ಹೆಚ್ಚಿನ ಒತ್ತನ್ನು ನೀಡಿದೆ. ಇದರ ಜೊತೆಗೆ ಕಾನೂನಿನ ಅರಿವನ್ನು ಮಹಿಳೆಯರಿಗೆ ನೀಡಬೇಕಿದೆ. ಕಾನೂನಿನ ಚೌಕಟ್ಟಿನಿಂದ ಹೊರಬಂದು ಬದುಕಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮಹಿಳೆಯರು ತಮಗೆ ಸಂವಿಧಾನ ನೀಡಿರುವ ಆಸ್ತಿ ಹಕ್ಕು, ಕೌಟುಂಬಿಕ ದೌರ್ಜನ್ಯ ಕಾಯ್ದೆ ಹಕ್ಕು, ಜೀವನಾಂಶ ಹಕ್ಕು, ವರದಕ್ಷಿಣೆ ಕಿರುಕುಳ ಮುಂತಾದ ಕಾನೂನಿನ ಬಗ್ಗೆ ಹೆಚ್ಚಿನ ಅರಿವನ್ನು ಹೊಂದಿರಬೇಕು ಎಂದರು.

ಬಜ್ ಇಂಡಿಯಾ ಸಂಸ್ಥೆಯ ರಾಜ್ಯ ಯೋಜನಾ ವ್ಯವಸ್ಥಾಪಕ ವೆಂಕಟೇಶ್ ಮಾತನಾಡಿ, ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾದುದಲ್ಲ, ಪ್ರತಿದಿನವೂ ಮಹಿಳೆಯರ ದಿನವೇ ಆಗಿದೆ. ಮಹಿಳೆಯರ ಶಕ್ತಿ, ಘನತೆ, ಹಿರಿಮೆ ಎಷ್ಟೆಂಬುದನ್ನು ಬಣ್ಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

2012ರಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ತುಮಕೂರಿನಲ್ಲಿ ಪ್ರಾರಂಭವಾದ ಬಜ್ ಇಂಡಿಯಾ ಸಂಸ್ಥೆ ಇಂದು 15 ಜಿಲ್ಲೆಗಳಲ್ಲಿ ಎಂಟೂವರೆ ಲಕ್ಷ ಜನರಿಗೆ ತರಬೇತಿ ನೀಡಿ ಅವರನ್ನು ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಲು ನೆರವಾಗಿದೆ. ಇದಲ್ಲದೆ ಸಹಸ್ರಾರು ಮಂದಿ ಮಹಿಳೆಯರು ಸಂಸ್ಥೆಯ ಗೆಳತಿಯರಾಗಿ ಮತ್ತೊಬ್ಬ ಗೆಳತಿಯ ಪ್ರಗತಿಗಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದುಡಿಯುತ್ತಿದ್ದಾರೆ. ಸಂಸ್ಥೆಯು ಮಹಿಳೆಯರಿಗೆ ವ್ಯಾಪಾರ ತರಬೇತಿ, ಸ್ವ ಉದ್ಯೋಗ ತರಬೇತಿ, ನಾಗರೀಕ ಹಕ್ಕುಗಳ ಬಗ್ಗೆ ಅರಿವು, ಸಾವಯವ ಕೃಷಿಗೆ ಒತ್ತು, ಪರಿಸರ ಸಂರಕ್ಷಣೆ ಸೇರಿದಂತೆ ಹತ್ತಾರು ವಿಭಿನ್ನ ಕಾರ್ಯಕ್ರಮಗಳ ಮೂಲಕ ಮಹಿಳೆಯರ ಮೂಲಕ ಸಮಾಜದಲ್ಲಿ ಹೊಸ ಬದಲಾವಣೆಯನ್ನು ತರುವ ಪ್ರಯತ್ನವನ್ನು ಮಾಡುತ್ತಿದೆ. ಮಹಿಳೆಯರಲ್ಲಿ ಸ್ವಾವಲಂಬಿಯಾಗಿ ಬದುಕುವ ಗುಣ ಅವರ ಜನ್ಮದಿಂದಲೇ ಬಂದಿರುತ್ತದೆ. ಆದರೆ ಆ ಸ್ವಾವಲಂಬಿ ಶಕ್ತಿಯನ್ನು ಹೊರತರಲು ಅವರಲ್ಲಿ ಆತ್ಮಸೈರ್ಯದ ಕಿಡಿಯನ್ನು ಹೊತ್ತಿಸುವ ಕೆಲಸವನ್ನು ಮಾತ್ರ ಬಜ್ ಸಂಸ್ಥೆ ಮಾಡುತ್ತಿದೆ ಎಂದರು.

ಸಮಾರಂಭದಲ್ಲಿ ವೈದ್ಯೆ ಡಾ.ಆಶಾ ಚೌದ್ರಿ ಮಹಿಳೆಯರ ಆರೋಗ್ಯದ ಬಗ್ಗೆ ಹಾಗೂ ತಂಡಗ ರೈತ ಸಂಘದ ಅಧ್ಯಕ್ಷ ಸೋಮಶೇಖರ್ ಕೃಷಿ ಬಗ್ಗೆ ಮಾಹಿತಿ ನೀಡಿದರು. ಬಜ್ ಸಂಸ್ಥೆಯಿಂದ ಸ್ವಾವಲಂಬಿ ಬದುಕು ರೂಪಿಸಿಕೊಂಡ ಮಹಿಳೆಯರು ತಮ್ಮ ಅನಿಸಿಕೆ ಹಂಚಿಕೊಂಡರು. ಬಜ್ ಸಂಸ್ಥೆಯಿಂದ ತರಬೇತಿ ಪಡೆದ ಕೆಲವು ಮಹಿಳೆಯರು ತಾವು ಉತ್ಪಾದಿಸಿದ ಆಹಾರ ಪದಾರ್ಥಗಳ ಮಾರಾಟ ನಡೆಸಿದರು. ಸಾವಯಕ ಕೃಷಿಕರಾದ ಶೈಲಶ್ರೀ, ತುಮಕೂರು ಜಿಲ್ಲಾ ಕಾರ್ಯಚರಣ ವ್ಯವಸ್ಥಾಪಕಿ ಮಮತಾ, ಕ್ಷೇತ್ರ ಸುಗಮಕಾರರಾದ ನಾಗರತ್ನಮ್ಮ, ರಂಜಿತ, ಪುಷ್ಪಲತಾ, ಸುನಿತಾ, ಮಂಜುಳಾ, ರಾಜೇಶ್ವರಿ ಮುಂತಾದವರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!