ಮಂಡ್ಯ: ನಾಪತ್ತೆಯಾಗಿದ್ದ ಖ್ಯಾತ ಕೃಷಿ ವಿಜ್ಞಾನಿ, ಪದ್ಮಶ್ರೀ ಪುರಸ್ಕೃತ ಡಾ.ಸುಬ್ಬಣ್ಣ ಅಯ್ಯಪ್ಪನ್ (70) ಅವರು ಜಿಲ್ಲೆಯ ಶ್ರೀರಂಗಪಟ್ಟಣದ ಸಾಯಿ ಆಶ್ರಮದ ಬಳಿ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೈಸೂರಿನ ವಿಶ್ವೇಶ್ವರ ನಗರ ಕೈಗಾರಿಕಾ ಪ್ರದೇಶದ ಅಕ್ಕಮಹಾದೇವಿ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ ಒಂದರಲ್ಲಿ ಪತ್ನಿ ಜೊತೆಗೆ ವಾಸವಾಗಿದ್ದ ಡಾ.ಸುಬ್ಬಣ್ಣ ಅಯ್ಯಪ್ಪನ್ ಮೇ 7ರಂದು ಮನೆಯಿಂದ ನಾಪತ್ತೆಯಾಗಿದ್ದರು. ಅವರು ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಸದ್ಯ ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಶನಿವಾರ ಸಂಜೆ ನದಿಯಲ್ಲಿ ಅಪರಿಚಿತ ಶವ ಕಂಡ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಸ್ಥಳಕ್ಕೆ ಬಂದು ಮೃತದೇಹವನ್ನು ನದಿಯಿಂದ ಹೊರೆತೆಗೆದು ನೋಡಿದಾಗ ವಿಜ್ಞಾನಿಯ ಗುರುತು ಪತ್ತೆ ಆಗಿದೆ. ನದಿ ದಡದಲ್ಲಿ ಅಯ್ಯಪ್ಪನ್ ಅವರ ಸ್ಕೂಟರ್ ಪತ್ತೆಯಾಗಿದೆ. ಮೂರು ದಿನಗಳ ಹಿಂದೆ ಸುಬ್ಬಣ್ಣ ಅವರು ಮನೆಯಿಂದ ಹೊರಗೆ ಹೋದವರು ವಾಪಸ್ಸಾಗಿರಲಿಲ್ಲ. ಹೀಗಾಗಿ, ಕುಟುಂಬಸ್ಥರು ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮೂರು ದಿನಗಳ ಹಿಂದೆ ಶ್ರೀರಂಗಪಟ್ಟಣದ ಸಾಯಿಬಾಬಾ ಆಶ್ರಮದ ಬಳಿ ನದಿಗೆ ಹಾರಿದ್ದಾರೆ ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ ಇವರ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
“ಸುಬ್ಬಣ್ಣ ಅಯ್ಯಪ್ಪನ್ ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಮತ್ತು ಶ್ರೀರಂಗಪಟ್ಟಣದ ಕಾವೇರಿ ನದಿಯ ದಡಕ್ಕೆ ಧ್ಯಾನಕ್ಕಾಗಿ ಹೋಗುತ್ತಿದ್ದರು. ದುರದೃಷ್ಟವಶಾತ್, ಅವರ ದೇಹ ನದಿಯಲ್ಲಿ ಪತ್ತೆಯಾಗಿದೆ” ಎಂದು ಸಂಬಂಧಿ ಮತ್ತು ವಕೀಲ ಶ್ರೀನಿಧಿ ಎಂಬವರು ಹೇಳಿದ್ದಾರೆ.
1955 ಡಿಸೆಂಬರ್ 10ರಂದು ಚಾಮರಾಜನಗರ ಜಿಲ್ಲೆಯ ಯಳಂದೂರಿನಲ್ಲಿ ಡಾ.ಸುಬ್ಬಣ್ಣ ಅಯ್ಯಪ್ಪನ್ ಅವರು ಜನಿಸಿದ್ದರು. 1975ರಲ್ಲಿ ಮಂಗಳೂರಿನಲ್ಲಿ ಮೀನುಗಾರಿಕೆ ವಿಜ್ಞಾನದಲ್ಲಿ ಪದವಿ (BFSc) ಮತ್ತು 1977ರಲ್ಲಿ ಮೀನುಗಾರಿಕೆ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ (MFSc) ಪಡೆದಿದ್ದರು. 1998ರಲ್ಲಿ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದುಕೊಂಡಿದ್ದರು.