ಬೆಳಗಾವಿ: ಸಂಕ್ರಾಂತಿ ಹಬ್ಬಕ್ಕೆ ಬುತ್ತಿ ಕೊಡಲು ಬಂದ ಅತ್ತೆಯನ್ನೇ ಅಳಿಯ ಚಾಕುವಿನಿಂದ ಇರಿದು ಹತ್ಯೆ ಮಾಡಿರುವಂತಹ ಆಘಾತಕಾರಿ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಕಲ್ಯಾಣ ನಗರ ನಿವಾಸಿ ರೇಣುಕಾ ಶ್ರೀಧರ ಪಡುಮುಖೆ (44) ಕೊಲೆಯಾದ ಮಹಿಳೆಯಾದರೆ, ಮಲ್ಲಪ್ರಭಾ ನಗರದ ನಿವಾಸಿ ಶುಭಂ ದತ್ತಾ ಬಿರ್ಜೆ (24) ಕೊಲೆ ಮಾಡಿದ ಆರೋಪಿ ಅಳಿಯ.ಕೌಟುಂಬಿಕ ಕಲಹಕ್ಕೆ ಅಳಿಯ ಅತ್ತೆಯ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ರೇಣುಕಾ ಅವರ ಪುತ್ರಿ ಛಾಯಾ ಹಾಗೂ ಶುಭಂ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿ ಮಧ್ಯೆ ಆಗಾಗ ಜಗಳಗಳಾಗುತ್ತಿತ್ತು. ಛಾಯಾ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದುದರಿಂದ, ಅಳಿಯ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ರೇಣುಕಾ ಆಗಾಗ ತಕರಾರು ಮಾಡುತ್ತಿದ್ದರು.
ಸಂಕ್ರಾಂತಿ ಹಬ್ಬದ ಕಾರಣ ರೇಣುಕಾ ಮಗಳನ್ನು ನೋಡಲು ಹಾಗೂ ಹಬ್ಬಕ್ಕೆ ಬುತ್ತಿ ಕೊಡಲು ಬಂದಿದ್ದರು. ಈ ವೇಳೆ ಆಕೆ ಹಾಗೂ ಅಳಿಯನ ನಡುವೆ ಜಗಳ ಏರ್ಪಟ್ಟಿದೆ. ಶುಂಭ ಮನೆಯಲ್ಲಿದ್ದ ಚಾಕುವನ್ನು ತಂದು ರೇಣುಕಾ ಅವರ ತೊಡೆಗೆ ಇರಿದಿದ್ದಾನೆ.
ಗಂಭೀರಗಾಗಿ ಗಾಯಗೊಂಡ ರೇಣುಕಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.ಇದೀಗ ಹತ್ಯೆಗೆ ಸಂಭಂಧಿಸಿದಂತೆ ಶುಭಂ, ಆತನ ತಂದೆ ಹಾಗೂ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.