ತುರುವೇಕೆರೆ: ಡಿಸೆಂಬರ್ 23,24 ಪಟ್ಟಣದ ಶ್ರೀ ಸತ್ಯಗಣಪತಿ ಜಾತ್ರೆ ಅದ್ದೂರಿಯಾಗಿ ನೆರವೇರಿತು. ಜಾತ್ರೆಯ ಮಹಿಮೆಯಿಂದಾಗಿ ತಾಲೂಕು ಕ್ರೀಡಾಂಗಣ ತ್ಯಾಜ್ಯದ ಕೇಂದ್ರವಾಗಿ ಮಾರ್ಪಟ್ಟಿದೆ.
ಪಟ್ಟಣದ ಹೃದಯಭಾಗದ ಸರ್ಕಾರಿ ಬಾಲಕರ ಪಾಠಶಾಲೆ ಆವರಣದಲ್ಲಿ ಇಷ್ಟು ವರ್ಷ ಜಾತ್ರೆ ನಡೆಯುತ್ತಿತ್ತು. ಆದರೆ ಈ ವರ್ಷ ಶಾಲೆಯ ಆವರಣದಲ್ಲಿ ಖಾಸಗಿ ಕಾರ್ಯಕ್ರಮ ನಡೆಸಲು ಅವಕಾಶವಿಲ್ಲ ಎಂದು ಆದೇಶಿಸಿದ ಕಾರಣ ಜಾತ್ರೆ ಕ್ರೀಡಾಂಗಣಕ್ಕೆ ಸ್ಥಳಾಂತರಗೊಂಡಿತು.
ಕ್ರೀಡಾಂಗಣದಲ್ಲಿ ಜಾತ್ರೆ ಜಾತ್ರೆ ನಡೆದು ಹರಾಜಿನಿಂದ ಸತ್ಯಗಣಪತಿ ಸೇವಾ ಸಮಾಜಕ್ಕೂ ಆದಾಯ ಬಂದಿದೆ. ಆದರೆ ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿದೆ. ಜಾತ್ರೆಯಲ್ಲಿ ನಾಗರೀಕರು ಮನರಂಜನಾ ಆಟೋಟಗಳನ್ನು ಆಡಿ, ಓಡಾಡಿ, ತಿಂಡಿ ತಿನಿಸುಗಳನ್ನು ತಿಂದು ಸಂತೋಷಪಟ್ಟಿರಬಹದು. ಆದರೆ ಈಗ ಅದೇ ಜನ ಕ್ರೀಡಾಂಗಣದಲ್ಲಿನ ತ್ಯಾಜ್ಯ ವಸ್ತುಗಳು, ಗಬ್ಬೆದ್ದು ನಾರುತ್ತಿರುವ ತ್ಯಾಜ್ಯ ಆಹಾರ ಪದಾರ್ಥಗಳಿಂದ ರೋಗರುಜಿನಗಳಿಗೆ ತುತ್ತಾಗುವ ಆತಂಕ ಎದುರಿಸುತ್ತಿದ್ದಾರೆ.
ತಾಲೂಕಿನ ಕ್ರೀಡಾಪಟುಗಳ ಕ್ರೀಡಾ ಅಭ್ಯಾಸಕ್ಕೆ ಹಾಗೂ ಹಿರಿಯ ನಾಗರೀಕರ ಸಂಜೆ ವೇಳೆ ವಾಕಿಂಗ್ ಎಂದು ಇರುವ ಏಕೈಕ ಸ್ಥಳ ಈ ಕ್ರೀಡಾಂಗಣ. ಜಾತ್ರೆಗೆ ಈ ಕ್ರೀಡಾಂಗಣ ಕೊಟ್ಟಿದ್ದೇ ಮೊದಲ ತಪ್ಪು. ಈಗ ಕ್ರೀಡಾಂಗಣ ಘನತ್ಯಾಜ್ಯದಿಂದ ಕೊಳಚೆ ನೀರಿನಿಂದ ತುಂಬಿ ಹೋಗಿದ್ದು, ಕ್ರೀಡಾಪಟುಗಳು ಆಟವಾಡಲು ಹಾಗೂ ಹಿರಿಯ ನಾಗರೀಕರು ವಾಕಿಂಗ್ ಮಾಡಲಾಗದ ಸ್ಥಿತಿಯಲ್ಲಿದೆ.
ಕ್ರೀಡಾಂಗಣದಲ್ಲಿ ಮೂಲಸೌಕರ್ಯ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ಶೌಚಾಲಯಕ್ಕೆ ವ್ಯವಸ್ಥೆ ಇಲ್ಲ. ಕ್ರೀಡಾಂಗಣದ ಆವರಣದಲ್ಲೇ ಅಂಗನವಾಡಿ ಕೇಂದ್ರ ಇರುವುದರಿಂದ ಪುಟ್ಟ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದೆ. ಜಾತ್ರೆ ಮುಗಿದು ನಾಲ್ಕೈದು ದಿನವಾದರೂ ಹರಾಜಿನಿಂದ ಆದಾಯ ಪಡೆದ ಗಣಪತಿ ಸಮಿತಿಯಾಗಲೀ, ಪಟ್ಟಣ ಪಂಚಾಯ್ತಿಯಾಗಲೀ ಕ್ರೀಡಾಂಗಣದ ಸ್ವಚ್ಛತೆ ಬಗ್ಗೆ ಗಮನಹರಿಸದಿರುವುದು ನಾಗರೀಕರ ಬೇಸರಕ್ಕೆ ಕಾರಣವಾಗಿದೆ.
ಸ್ಥಳೀಯ ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯ್ತಿ, ಜಾತ್ರೆಗೆ ಕ್ರೀಡಾಂಗಣ ಬಳಸಿಕೊಂಡ ಸತ್ಯಗಣಪತಿ ಸೇವಾ ಸಮಾಜ, ಜಾತ್ರೆ ಹರಾಜು ಪಡೆದುಕೊಂಡವರು ಯಾರಾದರೂ ಸರಿ ಕೂಡಲೇ ಕ್ರೀಡಾಂಗಣ ಸ್ವಚ್ಛಗೊಳಿಸಿ ಕ್ರೀಡಾಂಗಣದ ಉಳಿವಿಗೆ ಹಾಗೂ ನಾಗರೀಕರ, ಕ್ರೀಡಾಂಗಣದ ಆವರಣದಲ್ಲಿರುವ ಅಂಗನವಾಡಿ ಮಕ್ಕಳ ಆರೋಗ್ಯ ರಕ್ಷಣೆಗೆ ಮುಂದಾಗಬೇಕಿದೆ.
ವರದಿ: ಗಿರೀಶ್ ಕೆ ಭಟ್