ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್ ರಾಜ್ಯದ ಆರ್ಥಿಕ ದಿವಾಳಿತನವನ್ನು ತೋರಿಸಿದೆ. ಮೊದಲು ಪ್ರಕಟಿಸಿದ್ದ ಯೋಜನೆಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿದೆ ಎಂದು ಬೆಳಗಾವಿ ಸಂಸದರು ಹಾಗೂ ಮಾಜಿ ಮುಖ್ಯಮಂತ್ರೀಗಳಾದ ಜಗದೀಶ್ ಶೆಟ್ಟರ್ ಅವರು ಆರೋಪಿಸಿದ್ದಾರೆ. ಬಿಜೆಪಿ ಸರ್ಕಾರದ ಎಲ್ಲ ಯೋಜನೆಗಳಿಗೆ ತಿಲಾಂಜಲಿ ಕೊಟ್ಟಿದೆ. ತಾನೇ ಮತದಾರರಿಗೆ ಕೊಟ್ಟ ಗ್ಯಾರಂಟಿ ಯೋಜನೆಯನ್ನು ದಾರಿ ತಪ್ಪಿಸಿದೆ. ರೈತರು, ಮಹಿಳೆಯರು, ಬಡವರು ಮತ್ತು ಮಧ್ಯಮ ವರ್ಗದವರ ಮೂಗಿಗೆ ತುಪ್ಪ ಸವರಿದೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಗೆ ಸಾಕಷ್ಟು ಅನುದಾನ ಮತ್ತು ಯೋಜನೆ ಪ್ರಕಟಿಸಿಲ್ಲ. ಇದರಿಂದ ಸಾಮಾಜಿಕ ಮತ್ತ ಪ್ರಾದೇಶಿಕ ಅಸಮತೋಲನ ಎದ್ದು ಕಾಣುತ್ತಿದೆ. ತಾವೇ ಆರ್ಥಿಕ ತಜ್ಞರೆಂದುಕೊಂಡಿದ್ದ ಸಿದ್ದರಾಮಯ್ಯ ಅವರು ರಾಜ್ಯದ ಹಣಕಾಸಿನ ಹಳಿ ತಪ್ಪಿಸಿದ್ದಾರೆ. ಈ ಬಜೆಟ್ ನಿಂದ ಯಾರಿಗೂ ಸಂತೃಪ್ತಿ ಸಿಗಲು ಸಾಧ್ಯವಿಲ್ಲ. ಬರೀ ಹಳೆಯ ಯೋಜನೆ ಗಳಿಗೆ ಬಣ್ಣ ಬಳಿದು ಜನರ ಮುಂದಿಟ್ಟಿದೆ. ಬಹುಸಂಖ್ಯಾತರಾದ ಹಿಂದುಗಳಿಗೆ ಅನ್ಯಾಯ ಮಾಡಿ, ಗುತ್ತಿಗೆಯಲ್ಲಿ, ಶಿಕ್ಷಣದಲ್ಲಿ ಸೇರಿ ಎಲ್ಲದರಲ್ಲೂ ಮೀಸಲು ಕೊಟ್ಡು ಬರೀ ಮುಸ್ಲಿಮರ ತುಷ್ಟೀಕರಣ ಮುಂದುವರಿಸಲಾಗಿದೆ. ನೀರಾವರಿಗೆ ಕಿಂಚಿತ್ತು ಅನುದಾನ ಮೀಸಲಿಟ್ಡಿಲ್ಲ. ಕೃಷ್ಣೆ ಕಡೆ ಪಾದಯಾತ್ರೆ ಮಾಡಿ ಕೃಷ್ಣ ಮೇಲ್ದಂಡೆ ಯೋಜನೆಗಾಗಿ ಪ್ರತಿವರ್ಷ ೧೦ ಸಾವಿರ ಕೋಟಿ ರೂ. ಕೊಡುವುದಾಗಿ ಹೇಳಿದ್ದ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ ಈ ಬಜೆಟ್ ನಲ್ಲಿ ೨೨ ಸಾವಿರ ಕೋಟಿ ರೂ. ತೆಗೆದಿರಿಸಿದ್ದಾರೆ. ಕೃಷ್ಣ ಮೇಲ್ದಂಡೆ ಯೋಜನೆಗಾಗಿಯೇ ಒಟ್ಟು ೮೦ ಸಾವಿರ ಕೋಟಿ ರೂ. ಕೊಡಬೇಕಿತ್ತು. ಸಿದ್ದರಾಮಯ್ಯ ಅವರು ಅತಿ ಹೆಚ್ಚು ಸಾಲ ಮಾಡಿ ಜನರ ತಲೆ ಮೇಲೆ ಹಾಕಿ, ರಾಜ್ಯದ ಆರ್ಥಿಕತೆಯ ದಿಕ್ಕು ತಪ್ಪಿಸಿದ್ದಾರೆ. ಆರ್ಥಿಕ ತಜ್ಞ ನಂಜುಂಡಪ್ಪ ವರದಿ ಅನುಷ್ಠಾನ ಮಾಡುವಲ್ಲಿ ವಿಫಲವಾಗಿ ಅವರ ವರದಿಗೆ ಅವಮಾನ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗಕ್ಕೆ ಎಲ್ಲ ರೀತಿಯಿಂದಲೂ ಅನ್ಯಾಯವಾಗಿದೆ. ಜನಸಾಮಾನ್ಯರ ವಿರೋಧಿ ಬಜೆಟ್ ಇದು ಎಂದು ಶೆಟ್ಡರ್ ಅವರು ಕಿಡಿಕಾರಿದ್ದಾರೆ.
ಪ್ರತೀಕ್ ಚಿಟಗಿ




