ಚಿತ್ರದುರ್ಗ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ನಿರೀಕ್ಷೆಗೂ ಹೆಚ್ಚು ನಾಗಸಾಧು, ಸಂತರು, ಭಕ್ತಾದಿಗಳು ಭಾಗವಹಿಸುತ್ತಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಕುಂಭಮೇಳದಲ್ಲಿ ಭಾರೀ ಕಾಲ್ತುಳಿತ ಸಂಭವಿಸಿದ್ದು, 30 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ.ಇದರಲ್ಲಿ ಬೆಳಗಾವಿಯ ನಾಲ್ವರು ಸೇರಿದ್ದಾರೆ. ಜೊತೆಗೆ ಈ ಅವಘಡದಲ್ಲಿ ನಾಗಸಾಧು ಕೂಡ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮೃತ ನಾಗಸಾಧುವನ್ನು ರಾಜನಾಥ್ ಮಹಾರಾಜ್(49) ಎಂದು ಗುರುತಿಸಲಾಗಿದ್ದು, ಚಿತ್ರದುರ್ಗ ಮೂಲದವರಾಗಿದ್ದಾರೆ. ಇವರು ಬಂಜಾರ ಗುರುಪೀಠದ ಪೀಠಾಧಿಪತಿ ಸರ್ಧಾರ್ ಸೇವಾಲಾಲ್ ಶ್ರೀ ಒಡನಾಡಿಯಾಗಿದ್ದರು. ಕಳೆದ 15 ದಿನದ ಹಿಂದೆ ಅಷ್ಟೇ ಮಹಾಕುಂಭಮೇಳಕ್ಕೆ ಹೋಗಿದ್ದರು ಎನ್ನಲಾಗಿದೆ.
ಇನ್ನು ಈ ಬಗ್ಗೆ ಚಿತ್ರದುರ್ಗದ ಲಂಬಾಣಿ ಸೇವಾಲಾಲ್ ಗುರುಪೀಠದ ಪೀಠಾಧಿಪತಿ ಸರ್ಧಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿರುವ ರಾಜನಾಥ್ ಮಹಾರಾಜ್ ಪಾರ್ಥಿವ ಶರೀರವನ್ನು ಚಿತ್ರದುರ್ಗಕ್ಕೆ ತಲುಪಿಸಬೇಕೆಂದು ಉತ್ತರಪ್ರದೇಶ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅಲ್ಲದೇ ಆದಷ್ಟು ಬೇಗ ಪಾರ್ಥೀವ ಶರೀರ ತರಿಸುವಂತೆ ಕರ್ನಾಟಕ ಸರ್ಕಾರಕ್ಕೂ ಸಹ ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.
ರಾಜ್ ನಾಥ್ ಮಹಾರಾಜ್ ಸಿದ್ಧಿ ಸಾಧಕರಾಗಿದ್ದರು. ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಸಿಲುಕಿದ ರಾಜ್ನಾಥ್ ಸಾವೆಂಬುದು ನಂಬಲು ಆಗುತ್ತಿಲ್ಲ. ನಾಗಸಾಧುಗಳ ಪಾರ್ಥೀವ ಶರೀರ ಅನಾಥವಾಗಿ ಬಿದ್ದಿರೋದು ಬೇಸರ ತಂದಿದೆ.
ನಮ್ಮನ್ನು ಕುಂಭಮೇಳಕ್ಕೆ ಆಹ್ವಾನಿಸಿದ್ರು. ಕುಂಭಮೇಳಕ್ಕೆ ಹೋಗಬೇಕು, ಸಾಧುಸಂತರ ದರ್ಶನ ಪಡೆಯಬೇಕು, ಪುಣ್ಯ ಸ್ನಾನ ಮಾಡಬೇಕು ಎನ್ನುತಿದ್ದರು. ನಾಗಸಾಧುಗಳ ಮಾತು ನೆನೆದರೆ ದುಃಖ ಆಗುತ್ತಿದೆ ಎಂದರು.