ಬೆಳಗಾವಿ : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಸ್ವಾಮಿ ಲೋಕೇಶ್ವರನ ರಾಮ ಮಂದಿರ ಮಠವನ್ನು ಚಿಕ್ಕೋಡಿ ತಾಲೂಕು ಆಡಳಿತ ಸಂಪೂರ್ಣ ಧ್ವಂಸಗೊಳಿಸಿದೆ.
ಮೇಖಳಿ ಗ್ರಾಮದ ರಾಮ ಮಂದಿರ ಈ ಮಠ ಸ್ವಾಮೀಜಿಯು ಸರ್ಕಾರಿ ಗಾಯರಾಣಾ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಜರುಗಿಸಲಾಗಿದೆ.
ರಾಯಬಾಗ ತಹಶೀಲ್ದಾರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಮೇಖಳಿ ಗ್ರಾಮದ ಸರ್ವೇ ನಂ.225ರಲ್ಲಿ 8 ಎಕರೆ ಸರ್ಕಾರಿ ಜಮೀನನ್ನು ಲೋಕೇಶ್ವರ ಸ್ವಾಮೀಜಿ ಕಬಳಿಕೆ ಮಾಡಿ, ಎಂಟು ವರ್ಷಗಳ ಹಿಂದೆ ಮಠವನ್ನು ಕಟ್ಟಿದ್ದರಂತೆ.
ತಹಶೀಲ್ದಾರ್ ನೇತೃತ್ವದಲ್ಲಿ ಹಾಗೂ ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಬೆಳಗ್ಗೆಯಿಂದ ತೆರವು ಕಾರ್ಯಾಚರಣೆ ನಡೆದಿದ್ದು, ಮೂರು ಜೆಸಿಬಿಗಳನ್ನು ಬಳಸಿ, ಮಠದ ಕಟ್ಟಡವನ್ನು ಸಂಪೂರ್ಣವಾಗಿ ಕೆಡವಲಾಗಿದೆ.
ಮಠದ ಈ ಜಮೀನು ಗೋಮಾಳ ಜಮೀನಾಗಿದ್ದು, ಇದರಲ್ಲಿ ಯಾವುದೇ ನಿರ್ಮಾಣಕ್ಕೆ ಅವಕಾಶವಿರಲಿಲ್ಲ. ಆದರೆ ಸ್ವಾಮೀಜಿ ಅನಧಿಕೃತ ನಿರ್ಮಾಣ ಮಾಡಿದ್ದರು ಎಂಬ ಕಾರಣಕ್ಕೆ ಮಠವನ್ನು ನೆಲಸಮ ಮಾಡಲಾಯಿತು.




