ತುರುವೇಕೆರೆ: ತಾಲೂಕಿನ ಮಾಯಸಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ನಂದೀಶ್, ಮಾಜಿ ನಿರ್ದೇಶಕ ಎಂ.ಎನ್.ಗಂಗಯ್ಯ ಅವರ ನೇತೃತ್ವದ ತಂಡ ಸಂಘದ 11 ಸಾಲಗಾರರ ಹಾಗೂ ಒಂದು ಸಾಲಗಾರರಲ್ಲದ ಒಟ್ಟು 12 ಸ್ಥಾನಗಳಲ್ಲೂ ಭರ್ಜರಿ ಜಯ ಸಾಧಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.
ಡಿಸೆಂಬರ್ 30 ರಂದು ನಡೆದ ಮಾಯಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸಂಘದ 12 ನಿರ್ದೇಶಕರ ಸ್ಥಾನಗಳಿಗೆ ಒಟ್ಟು 23 ಮಂದಿ ಸ್ಪರ್ಧಿಸಿದ್ದರು. ಸಂಘದಲ್ಲಿ ಗೆಲುವು ಸಾಧಿಸಬೇಕೆನ್ನುವ ಆಶಯದಿಂದ ಎರಡು ತಂಡಗಳು ಸಂಘದ ಮತದಾರರ ಮನಗೆಲ್ಲಲು ತಂತ್ರ, ರಣತಂತ್ರ ರೂಪಿಸಿ ಚುನಾವಣೆ ರಂಗೇರುವಂತೆ ಮಾಡಿದ್ದರು. ಮಾಯಸಂದ್ರ ಸಹಕಾರ ಸಂಘದ ಚುನಾವಣೆಯ ಪ್ರಚಾರ ಕೇವಲ ಮಾಯಸಂದ್ರ ಮಾತ್ರವಲ್ಲದೆ ತಾಲೂಕಿನ ಗಮನಸೆಳೆದಿತ್ತು. ಅಷ್ಟರಮಟ್ಟಿಗೆ ಚುನಾವಣೆಯ ಕಾವು ಎಲ್ಲೆಡೆ ಹಬ್ಬಿತ್ತು. ಡಿಸೆಂಬರ್ 30 ರಂದು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾದ ಮತದಾನವು ಸಂಜೆ 4 ಗಂಟೆಯವರೆಗೆ ಶಾಂತಿಯುತವಾಗಿ ನೆರವೇರಿತು.

ಚುನಾವಣೆ ಮತದಾನ ನಡೆದು ಮತ ಎಣಿಕೆ ಪ್ರಕ್ರಿಯೆ ಮುಗಿದು ಫಲಿತಾಂಶ ಹೊರಬಂದಾಗ ಸಂಘದಲ್ಲಿ ಹೊಸ ಇತಿಹಾಸವೇ ಸೃಷ್ಟಿಯಾಗಿತ್ತು. ಸಂಘದ ಮತದಾರರು ಒಂದೇ ತಂಡವನ್ನು ಸಾಲಗಾರರ ಹಾಗೂ ಸಾಲಗಾರರಲ್ಲದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಸಂಘದಲ್ಲಿ ಅಧಿಕೃತ ವಿರೋಧ ಪಕ್ಷವೇ ಇಲ್ಲದಂತೆ ಮಾಡಿರುವುದು ಫಲಿತಾಂಶದ ಮೂಲಕ ಬಹಿರಂಗವಾಯಿತು.
ಸಂಘದ ಮಾಜಿ ನಿರ್ದೇಶಕರಾದ ನಂದೀಶ್, ಎಂ.ಎನ್. ಗಂಗಯ್ಯ ನೇತೃತ್ವದ ತಂಡ ಚುನಾವಣೆಯಲ್ಲಿ ಸ್ಪಷ್ಟ ಗೆಲುವನ್ನು ಸಾಧಿಸಿ ಸಂಘದ ಆಡಳಿತ ಮಂಡಳಿಯ ಅಧಿಕಾರದ ಗದ್ದುಗೆಗೆ ಏರಿದೆ. ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದಿಂದ ಅಶೋಕ್ ಡಿ.ಆರ್. (855 ಮತಗಳು), ಕೆ.ಎಂ. ಗಿಡ್ಡಯ್ಯ (940), ನಂದಿನಿಮಂಜುನಾಥ್ (862), ಪದ್ಮರಾಘವೇಂದ್ರ (838), ಕೆ.ಆರ್.ಬಾಲರಾಜ್ (781), ಹೆಚ್.ಟಿ.ಯೋಗೀಶ್ (863), ಕೆ.ರಘು (884), ಎಂ.ಆರ್.ರಂಗನಾಥ್ (878), ಎಂ.ಎಲ್. ಲೋಕೇಶ್(911), ಎಂ.ಎಸ್.ಶಿವರಾಜ್ (747), ಜೆ.ಎಸ್. ಸುನಿಲ್ (1011) ಮತಗಳನ್ನು ಪಡೆದು ಜಯಗಳಿಸಿದರೆ, ಸಾಲಗಾರರಲ್ಲದ ಕ್ಷೇತ್ರದಿಂದ ಜನಾರ್ಧನಪುರದ ವೆಂಕಟೇಶ್ (555) ಗೆಲುವು ಸಾಧಿಸಿದರು.

ಅಭ್ಯರ್ಥಿಗಳ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಅಭಿಮಾನಿಗಳು, ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ವಿಜೇತರಾದ ನೂತನ ನಿರ್ದೇಶಕರಿಗೆ ಪುಷ್ಪಾಹಾರ ಹಾಕಿ ಅಭಿನಂದಿಸಿದರು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ರಿಟರ್ನಿಂಗ್ ಆಫೀಸರ್ ಶ್ರೀನಿವಾಸ್ ಕಾರ್ಯನಿರ್ವಹಿಸಿದರು. ಸಂಘದ ಸಿಇಒ ಮಮತಾ ಉಪಸ್ಥಿತರಿದ್ದರು. ಸಬ್ ಇನ್ಸ್ ಪೆಕ್ಟರ್ ಮೂರ್ತಿ ಚುನಾವಣೆಗೆ ಬಿಗಿಬಂದೋಬಸ್ತ್ ಒದಗಿಸಿದ್ದರು.
ವರದಿ: ಗಿರೀಶ್ ಕೆ ಭಟ್




